
ದೇಶಾದ್ಯಂತ ನೂರಾರು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ‘ಫೀಲ್ ದೆಯರ್ ಪೇನ್’ ಎಂಬ ವಿಶಿಷ್ಟ ಅಭಿಯಾನವೊಂದನ್ನು ನಡೆಸುತ್ತಿದ್ದಾರೆ. ಈ ಅಭಿಯಾನವನ್ನು ಪ್ಯಾನ್ ಇಂಡಿಯಾ ಕಲೆಕ್ಟಿವ್, ವೀಗನ್ ಇಂಡಿಯಾ ಮೂವ್ಮೆಂಟ್ ಆಯೋಜಿಸಿದೆ. ಭಾರತದ 15 ನಗರಗಳಲ್ಲಿ ಸ್ವಯಂಸೇವಕರು ಬೀದಿಗಿಳಿದು ವಿಶ್ವದ ಅತ್ಯಂತ ನಿರ್ಲಕ್ಷಿತ ಬಲಿಪಶು ಪ್ರಾಣಿಗಳ ನೋವಿನ ನೈಜತೆಯನ್ನು ತೋರಿಸಿದ್ದಾರೆ.
ಬೆಂಗಳೂರಿನ ಸಪ್ಪರ್ ಯುದ್ಧ ಸ್ಮಾರಕದ ಬಳಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನದ ಭಾಗವಾಗಿ ಸಾರ್ವಜನಿಕರು ಪಂಜರದೊಳಗೆ ಕುಳಿತುಕೊಳ್ಳಲು ಅಥವಾ ಕ್ರೇಟ್‌ನಲ್ಲಿ ಎಲ್ಲಿಯವರೆಗೆ ನಿಲ್ಲಲು ಸಾಧ್ಯವೋ ಅಷ್ಟು ಹೊತ್ತು ನಿಲ್ಲುವಂತೆ ವಿನಂತಿಸಲಾಗಿದೆ. ಪ್ರತಿದಿನ ಪ್ರಾಣಿಗಳನ್ನು ಮನುಷ್ಯರು ಸರಕುಗಳಾಗಿ ಬಂಧಿಸುತ್ತಾರೆ. ಹೀಗಾಗಿ ಮನುಷ್ಯರು ಅದರಂತೆ ಕ್ರೇಟ್‌ನಲ್ಲಿ ಕುಳಿತುಕೊಳ್ಳುವ ಮೂಲಕ ಪ್ರಾಣಿಗಳ ನೋವನ್ನು ಒಂದು ಬಾರಿ ಅನುಭವಿಸುವಂತೆ ಮಾಡಲಾಗಿದೆ. ಆಹಾರ, ಬಟ್ಟೆ, ಮನರಂಜನೆ, ಪ್ರಯೋಗ ಇತ್ಯಾದಿಗಳಿಗಾಗಿ ನಾವು ಪ್ರಾಣಿಗಳನ್ನು ಶೋಷಣೆ ಮಾಡುತ್ತೇವೆ. ನಮ್ಮ ದೈನಂದಿನ ಆಯ್ಕೆಗಳು ಪ್ರಾಣಿಗಳ ಮೇಲೆ ಉಂಟುಮಾಡುವ ಅಪಾರವಾದ ಸಮಸ್ಯೆಗಳ ಬಗ್ಗೆ ಈ ಅಭಿಯಾನವು ತೋರ್ಪಡಿಸುತ್ತದೆ.
“ಪ್ರತಿಯೊಂದು ಪ್ರಾಣಿಗೂ ಜೀವವಿರುತ್ತದೆ. ನಮ್ಮಂತೆಯೇ ಅವುಗಳಿಗೂ ಕುಟುಂಬ, ಸ್ವಾತಂತ್ರ್ಯ ಮತ್ತು ಜೀವನವಿರುತ್ತದೆ. ಆದರೆ ನಾವು ಪ್ರಾಣಿಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತೇವೆ” ಎಂದು ಅಭಿಯಾನದ ಸಂಘಟಕ ಖುಶಾಲ್ ಹೇಳಿದ್ದಾರೆ.