ಪ್ರವೀಣ್ ಹತ್ಯೆಗೆ 2 ಬಾರಿ ವಿಫಲ ಯತ್ನ ನಡೆಸಿದ್ದ ಹಂತಕರು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಹತ್ಯೆಗೆ ಈ ಮೊದಲೇ ಎರಡು ಬಾರಿ ವಿಫಲಯತ್ನ ನಡೆಸಿದ್ದ ಹಂತಕರು ಮೂರನೇ ಬಾರಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಮೊದಲ ಬಾರಿ ಹಂತಕರು ಪ್ರವೀಣ್ ಹತ್ಯೆಗೆ ಬಂದಾಗ ಅಂಗಡಿ ಬಳಿ ಜನರು ಇರುವುದನ್ನು ನೋಡಿ ಹಿಂತಿರುಗಿದ್ದರು. ಅದೇ ರೀತಿ ಎರಡನೆ ಬಾರಿ ಹಂತಕರು ಬಂದಾಗ ಅಂಗಡಿಯಲ್ಲಿ ಪ್ರವೀಣ್ ಇರಲಿಲ್ಲ.
ಆದರೆ, 3ನೇ ಬಾರಿ ಪ್ರವೀಣ್ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗುವಾಗ ಹೊಂಚು ಹಾಕಿ ಹಂತಕರು ವಿದ್ಯುತ್ ಕಡಿತಗೊಳಿಸಿ ಕೊಲೆ ಮಾಡಿ ಪರಾರಿಯಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.ಬಂಧಿತರ ಸಂಖ್ಯೆ 6ಕ್ಕೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇಬ್ಬರನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ 6ಕ್ಕೇರಿದೆ.
ನಿನ್ನೆ ಸುಳ್ಯದ ನಾವೂರ ನಿವಾಸಿ ಅಬಿದ್ ಮತ್ತು ಬೆಳ್ಳಾರೆ ನಿವಾಸಿ ನೌಫಾಲ್‍ನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಅಂದು ಪ್ರವೀಣ್ ಕೊಲೆ ಮಾಡಲು ಮೂವರು ಬಂದಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ನಿನ್ನೆ ಬಂಧಿಸಿರುವ ಆರೋಪಿ ನೌಫಾಲ್ ಈ ಪ್ರಕರಣದಲ್ಲಿ ಪರೋಕ್ಷವಾಗಿ ಬಾಗಿಯಾಗಿರುವುದು ಗೊತ್ತಾಗಿದೆ.
ಪ್ರವೀಣ್ ಅಂಗಡಿಯನ್ನು ಎಷ್ಟು ಹೊತ್ತಿಗೆ ತೆಗೆಯುತ್ತಾರೆ, ಎಷ್ಟು ಹೊತ್ತಿಗೆ ಅಂಗಡಿಗೆ ಬರುತ್ತಾರೆ, ಯಾವಾಗ ಅಂಗಡಿ ಮುಚ್ಚುತ್ತಾರೆಂಬ ಮಾಹಿತಿಯನ್ನು ಸಂಗ್ರಹಿಸಿ ಆರೋಪಿ ನೌಫಾಲ್ ಹಂತಕರಿಗೆ ತಿಳಿಸುತ್ತಿದ್ದ ಎಂಬುದು ತಿಳಿದು ಬಂದಿದೆ.ಒಟ್ಟಾರೆ ಈತ ಪ್ರವೀಣ್ ಹತ್ಯೆಯ ಯೋಜನೆ ರೂಪಿಸುತ್ತಿದ್ದ ಹಂತಕರಿಗೆ ಪರೋಕ್ಷವಾಗಿ ಕೆಲಸ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಅಂದು ಪ್ರವೀಣ್ ಹತ್ಯೆ ಮಾಡಲು ಬಂದಿದ್ದ ಹಂತಕರೊಂದಿಗೆ ಅಬೀದ್ ಬಂದಿದ್ದನು.
ಅಲ್ಲದೆ, ತನ್ನ ಬಳಿಯಿದ್ದ ಕೇರಳ ನೋಂದಣಿ ಸಂಖ್ಯೆಯ ವಾಹನವನ್ನು ಹಂತಕರಿಗೆ ನೀಡಿದ್ದನು. ಹಂತಕರು ಅದೇ ವಾಹನದಲ್ಲಿ ಬಂದು ಪ್ರವೀಣ್ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂಬ ವಿವರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ಒಟ್ಟಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಪ್ರಮುಖ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.