ರಾಜಕೀಯ

ಪ್ರವಾಹ ಪೀಡಿತ ಪ್ರದೇಶಕ್ಕೆ ಮೂಟೆ ಹೊತ್ತು ಆಹಾರ ಸಾಗಿಸುತ್ತಿರುವ ಬಿಜೆಪಿ ಎಂಎಲ್‌ಎ!

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಸ್ಸಾಂ ಅಕ್ಷರಶಃ ನಲುಗಿ ಹೋಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇನ್ನು ಈ ಸಂದರ್ಭದಲ್ಲಿ ಇಲ್ಲಿನ ಶಾಸಕರೊಬ್ಬರು ಜನರ ಸೇವೆಗೆ ಖುದ್ದಾಗಿ ಆಗಮಿಸಿದ್ದು, ಇವರ ಈ ಸೇವೆ ಕಂಡು ಇಲ್ಲಿನ ಜನತೆ ಮೆಚ್ಚುಗೆ ಸೂಚಿಸಿದ್ದಾರೆ.

ನಾಗಾಂವ್ ಸದರ್ ಶಾಸಕ ರೂಪಕ್ ಶರ್ಮಾ ಅವರು ಹೆಗಲ ಮೇಲೆ, ಪರಿಹಾರ ನೀಡಿದ ಆಹಾರ ಪದಾರ್ಥಗಳನ್ನು ಹೊತ್ತು ಜನರ ಜೊತೆ ಸಾಗುತ್ತಿದ್ದಾರೆ. ಈ ಫೋಟೋ-ವಿಡಿಯೋಗಳು ಸಖತ್‌ ವೈರಲ್‌ ಆಗಿವೆ.

ಈ ಭಾರತೀಯ ಜನತಾ ಪಕ್ಷದ ಶಾಸಕ, ತನ್ನ ಪ್ರದೇಶದಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ನೀಡಲು ನಾಗಾವ್‌ಗೆ ಆಗಮಿಸಿದ್ದರು.

ಈ ವೇಳೆ ಸ್ವತಃ ಶಾಸಕರೇ ಆಲೂಗೆಡ್ಡೆ ತುಂಬಿದ್ದ ಚೀಲವನ್ನು ಬೆನ್ನ ಮೇಲೆ ಎತ್ತಿಕೊಂಡು ಸಾಗಾಟ ಮಾಡಿದ್ದಾರೆ.

ಇತ್ತೀಚೆಗೆಯಷ್ಟೇ ಅಂದರೆ ಮೇ 20 ರಂದು, ದೋಣಿ ತಲುಪುವ ವೇಳೆಗೆ ಕಾಲುಗಳು ಒದ್ದೆಯಾಗುತ್ತವೆ ಎಂದು ಲ್ಯಾಮ್ಡಿಂಗ್ ಶಾಸಕ ಶಿಬು ಮಿಶ್ರಾ, ಬೇರೊಬ್ಬರ ಹೆಗಲನ್ನು ಏರಿ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿದ್ದರು.

ಈ ನಡವಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇನ್ನು ರೂಪಕ್ ಶರ್ಮಾ ಮತ್ತು ಶಿಬು ಮಿಶ್ರಾ ಇಬ್ಬರೂ ಬಿಜೆಪಿ ಶಾಸಕರು.

ಆದರೆ ದುಃಖದ ಸಮಯದಲ್ಲಿ ಜನರ ಜೊತೆ ನಿಲ್ಲುವ ವಿಷಯಕ್ಕೆ ಬಂದಾಗ, ಇಬ್ಬರ ದೃಷ್ಟಿಕೋನವು ವಿಭಿನ್ನವಾಗಿದೆ.ಅಸ್ಸಾಂನಲ್ಲಿ ಇದುವರೆಗೆ 18.35 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.

ರಾಜ್ಯಾದ್ಯಂತ ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 179 ಕ್ಕೆ ಏರಿದೆ. ಕ್ಯಾಚಾರ್, ಬರ್ಪೇಟಾ, ದರಾಂಗ್, ದಿಬ್ರುಗಢ, ಹೊಜೈ, ಕಮ್ರೂಪ್, ಕಮ್ರೂಪ್ ಮೆಟ್ರೋಪಾಲಿಟನ್, ಕರೀಮ್‌ಗಂಜ್, ಲಖಿಂಪುರ, ಮೋರಿಗಾಂವ್, ನಾಗಾಂವ್, ನಲ್ಬರಿ ಮತ್ತು ಶಿವಸಾಗರ್ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ.

ಕ್ಯಾಚಾರ್‌ನಲ್ಲಿ ಜನರು ಇನ್ನೂ ಪ್ರವಾಹವನ್ನು ಎದುರಿಸುತ್ತಿದ್ದಾರೆ.ಪ್ರಸ್ತುತ 1618 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ ಮತ್ತು ರಾಜ್ಯದಲ್ಲಿ 47,198.87 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ ಎಂದು ಎಎಸ್‌ಡಿಎಂಎ ಮಾಹಿತಿ ನೀಡಿದೆ.

ಸರ್ಕಾರವು 20 ಜಿಲ್ಲೆಗಳಲ್ಲಿ 413 ಪರಿಹಾರ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳನ್ನು ತೆರೆದಿದೆ. ಈ ಶಿಬಿರಗಳಲ್ಲಿ 2,78,060 ಜನರು ಆಶ್ರಯ ಪಡೆದಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button