ಪ್ರಯಾಣಿಕನಿಗೆ ನಿಷೇಧ ಮಹುವಾ ತರಾಟೆ

ವಿಮಾನದಲ್ಲಿ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿಗೆ ಕೇವಲ ೩೦ ದಿನಗಳ ಅವಧಿಗೆ ನಿಷೇಧ ಹೇರಿರುವ ಏರ್ ಇಂಡಿಯಾ ಏರ್ ಲೈನ್ಸ್ ಕ್ರಮಕ್ಕೆ ತೃಣ ಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ತರಾಟೆ ತೆಗೆದುಕೊಂಡಿದ್ದಾರೆ.
ಹಾಸ್ಯನಟ ಕುನಾಲ್ ಕಮ್ರಾ ಅವರು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರನ್ನು “ಹೆಕ್ಲಿಂಗ್” ಆರೋಪಕ್ಕಾಗಿ ಬಹು ವಿಮಾನಯಾನ ಸಂಸ್ಥೆಗಳಿಂದ ಮೂರು ತಿಂಗಳವರೆಗೆ ನಿಷೇಧವನ್ನು ಎದುರಿಸುತ್ತಿದ್ದ ಪ್ರಕರಣ ಉಲ್ಲೇಖಿಸಿದ ಅವರು, ಸಹ ಪ್ರಯಾಣಿಕ ಮೂತ್ರ ವಿಸರ್ಜಿಸಿದ ಗಂಭೀರ ಪ್ರಕರಣದಲ್ಲಿ ಬರೀ ಒಂದು ತಿಂಗಳ ನಿಷೇಧ ಹೇರಿರುವ ಕ್ರಮ ಅರ್ಥವಾಗಿಲ್ಲ ಎಂದಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ನಲ್ಲಿ ಮೊಯಿತ್ರಾ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.ಏನಿದು ಘಟನೆ?: ಇತ್ತೀಚಿಗೆ ನ್ಯೂಯಾರ್ಕ್-ದೆಹಲಿ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಮಹಿಳಾ ಸಹ-ಪ್ರಯಾಣಿಕನಿಗೆ ಮೂತ್ರ ವಿಸರ್ಜಿಸಿದ್ದಾನೆ.
ಈ ಸಂಬಂಧ ಪೊಲೀಸರು ದೂರು ದಾಖಲಿಸಿದ್ದಾರೆ. ಮೊದಲ ಹಂತವಾಗಿ ಈ ಪ್ರಯಾಣಿಕನನ್ನು ೩೦ ದಿನಗಳವರೆಗೆ ನಿಷೇಧಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.