Uncategorizedರಾಜ್ಯ

ಪ್ರತಿಭಟನೆ, ಸಮಾವೇಶಗಳಲ್ಲೇ ಕಾಲ ಕಳೆದ ಕಾಂಗ್ರೆಸ್ ನಾಯಕರು, ಮುಂದಿದೆ ಸವಾಲು

ಈವರೆಗೂ ಪ್ರತಿಭಟನೆ, ಬಹಿರಂಗ ಸಮಾವೇಶಗಳಿಂದ ಕಾಲಹರಣ ಮಾಡಿಕೊಂಡಿದ್ದ ಕಾಂಗ್ರೆಸ್ಗೆ ಇನ್ನು ಮುಂದೆ ಪಕ್ಷ ಸಂಘಟನೆಯ ನೈಜ ಸವಾಲುಗಳು ಎದುರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆಗಳು ಅಗ್ನಿ ಪರೀಕ್ಷೆಗಳಾಗುತ್ತಿವೆ.

ಪ್ರತಿಭಟನೆ, ಬಹಿರಂಗ ಸಮಾವೇಶಗಳ ಮೂಲಕ ಈವರೆಗೂ ಸಾಂಪ್ರದಾಯಿಕ ಶೈಲಿಯಲ್ಲಿ ಸಂಘಟನೆ ಮಾಡುತ್ತಿದ್ದ ಕಾಂಗ್ರೆಸ್, ಕಾಲಮಾನಕ್ಕೆ ತಕ್ಕಂತೆ ಬದಲಾವಣೆಯ ಪರ್ವಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ.

ರಾಜಕಾರಣದಲ್ಲಿ ಕಾಪೆರ್ರೇಟ್ ಶೈಲಿ ಚಟುವಟಿಕೆಗಳು ತಲೆ ಹಾಕಿವೆ. ಚುನಾವಣೆ ವರ್ಷದಲ್ಲಿ ರಣತಂತ್ರಗಾರರ ಮೊರೆ ಹೋಗುವ ರಾಜಕೀಯ ಪಕ್ಷಗಳು ಅವರ ಸಲಹೆ, ಶಿಫಾರಸ್ಸು ಆಧರಿಸಿ ಸಂಘಟನೆ ಚಟುವಟಿಕೆಗಳನ್ನು ಮಾಡಲಿವೆ.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮಣಿಪುರದಂತಹ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯೇ ಕೈಚೆಲ್ಲುವ ಹಂತದಲ್ಲಿತ್ತು.

ಆದರೆ ಕಾಪೆರ್ರೇಟ್ ಸಂಸ್ಥೆಯ ಸಲಹೆ ಮೇರೆಗೆ ಸ್ಥಳೀಯವಾಗಿ ಬೂತ್ ಸಮಿತಿಗಳನ್ನು ರಚಿಸಿ 85 ಸಾವಿರಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ ಪ್ರಯುಕ್ತ, ಸೋಲುವ ನಿರಾಶವಾದದ ಫಲಿತಾಂಶ ಗೆಲುವಿನ ಜೈಕಾರದತ್ತ ಮುನ್ನುಗ್ಗಿತ್ತು.

ರಾಜ್ಯದಲ್ಲೂ ಆ ರೀತಿಯ ವಾತಾವರಣ ನಿರ್ಮಿಸಲು ಎಲ್ಲಾ ಪಕ್ಷಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಕಳೆದೆರಡು ವರ್ಷಗಳಿಂದಲೂ ಕಾಪೆರ್ರೇಟ್ ಶೈಲಿಯ ರಾಜಕಾರಣಕ್ಕೆ ಅಣಿಯಾಗುತ್ತಿದೆ.ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಸಹಪಾಠಿಯಾಗಿದ್ದ ತಂಡದ ಸದಸ್ಯರು ಬೆಂಗಳೂರಿನಲ್ಲಿ ಬೀಡುಬಿಟ್ಟು ಪಕ್ಷದ ಪರವಾಗಿ ಕೆಲಸ ಮಾಡಲಾರಂಭಿಸಿದ್ದಾರೆ.

ಅವರ ಸಲಹೆ ಮೇರೆಗೆ ಈವರೆಗೂ ಹಲವಾರು ಚಟುವಟಿಕೆಗಳು ನಡೆದಿವೆ. ನಾಯಕರ ಮಾತಿನ ಧಾಟಿಯೂ ಕಾಪೆರ್ರೇಟ್ ಸಂಸ್ಥೆಯ ಸಲಹೆ ಆಧರಿಸಿ ಅಭಿವ್ಯಕ್ತವಾಗುತ್ತಿದೆ.

ಆದರೂ ರಾಜ್ಯದಲ್ಲಿ ಬಿಜೆಪಿಯನ್ನು ಹತ್ತಿಕ್ಕಲು ಕೈ ಪಡೆಗೆ ಸಾಧ್ಯವಾಗುತ್ತಿಲ್ಲ.ಕೇಸರಿ ಬಳಗ ಆಗಾಗ್ಗೆ ಬಳಸುವ ಭಾವನಾತ್ಮಕ ವಿಷಯಗಳಿಂದಾಗಿ ರಾಜಕಾರಣದ ಸವಾಲುಗಳಿಂದ ಕಾಂಗ್ರೆಸ್ ಹೈರಾಣಾಗುತ್ತಿದೆ.

ಪಕ್ಷದ ಹಿರಿಯ ನಾಯಕರು ಹೊಸ ವ್ಯವಸ್ಥೆಗಳಿಗೆ ಒಗ್ಗಿಕೊಳ್ಳದೆ ತಮ್ಮ ಸಾಂಪ್ರದಾಯಿಕ ಶೈಲಿಗೆ ಅಂಟಿಕೊಂಡಿರುವುದರಿಂದ ಕಾಂಗ್ರೆಸ್ ಸ್ಥಿತಿ ತ್ರಿಶಂಕು ಮಟ್ಟದಲ್ಲಿ ನಲುಗುತ್ತಿದೆ.

ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣವಿದೆ ಎಂಬ ಸುಳಿವು ದೊರೆತಿದೆ.ಆದರೆ ಅದಕ್ಕೆ ಸಾಕಷ್ಟು ಪೂರ್ವ ತಯಾರಿಗಳು ಅಗತ್ಯ ಎಂಬ ಶಿಫಾರಸ್ಸನ್ನೂ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷವನ್ನು ಲೀಡರ್ ಬೇಸ್ನಿಂದ ಕೇಡರ್ಬೇಸ್ ಸಂಘಟನೆಯನ್ನಾಗಿ ಪರಿವರ್ತಿಸುವ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಲೇ ಇವೆ.

ಆದರೆ ಅದು ಸಾಧ್ಯವಾಗಿಲ್ಲ.ಬಿಜೆಪಿ ಸರ್ಕಾರದ ವೈಪಲ್ಯಗಳನ್ನು ಗುರುತಿಸಿ ಅವುಗಳನ್ನು ಸಾರ್ವತ್ರಿಕಗೊಳಿಸಿ ಹೋರಾಟ ನಡೆಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ.

ಕಾಂಗ್ರೆಸ್ ಯಾವುದೇ ವಿಷಯ ಕೈಗೆತ್ತಿಕೊಂಡರು ಬಿಜೆಪಿ ಅದನ್ನು ತಿರುವು ಮುರುವು ಮಾಡಿ ರಾಜಕೀಯವಾಗಿ ಹಾನಿ ಮಾಡುತ್ತಿದೆ.

ಪಕ್ಷ ಸಂಘಟನೆಯಲ್ಲಿ ಕಾಪೆರ್ರೇಟ್ ಕುಳಗಳು ಹಸ್ತಕ್ಷೇಪ ಮಾಡಲಾರಂಭಿಸಿದ ಬಳಿಕ, ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ ಚಿಂತಕರ ಚಾವಡಿ (ಥಿಂಕ್ಟ್ಯಾಂಕ್) ಬದಿಗೆ ಸರಿದಿದೆ.

ಒಂದು ಕಾಲದಲ್ಲಿ ಪಕ್ಷದ ನೀತಿ ನಿರೂಪಣಾ ಸಮಿತಿಯಂತೆ ಕೆಲಸ ಮಾಡಿದ್ದ ಬುದ್ದಿ ಜೀವಿಗಳು, ಈಗ ಕಾರ್ಯಕ್ರಮ ನಿರೂಪಣಾ ಜವಾಬ್ದಾರಿಗೆ ಸೀಮಿತವಾಗುತ್ತಿದ್ದಾರೆ.ಪಕ್ಷದಲ್ಲಿ ರಣನೀತಿ ನಿರೂಪಿಸುವಲ್ಲಿಯೂ ಒಮ್ಮತ ಮೂಡಿಲ್ಲ, ಪ್ರಭಾವಿ ನಾಯಕರು ತಮ್ಮದೇ ಆದ ಪ್ರತ್ಯೇಕ ವಾರ್ರೂಂಗಳನ್ನು ತೆರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪಕ್ಷದ ವೇದಿಕೆಗಳಲ್ಲಿ ಸಾರ್ವಜನಿಕರಿಗೆ ಪ್ರಿಯವಾಗುವ ವಿಷಯಗಳ ಪ್ರಸ್ತಾಪ ಮಾಡುವಲ್ಲಿ ಎಡವಲಾಗುತ್ತಿದೆ. ಕಾಂಗ್ರೆಸ್ಗೆ ಪೂರಕವಾದ ವಾತಾವರಣವಿದ್ದರೂ, ಅದನ್ನು ಸದ್ಭಳಕೆ ಮಾಡಿಕೊಳ್ಳಲು ನಾಯಕತ್ವ ವಿಫಲವಾಗುತ್ತಿದೆ.

ಬಿಜೆಪಿ ಪದೇ ಪದೇ ಕಾಂಗ್ರೆಸ್ನ ಭಿನ್ನಮತದ ಮೇಲೆಯೇ ಗಮನ ಕೇಂದ್ರೀಕರಿಸಿ ವಾಗ್ಧಾಳಿ ನಡೆಸುವ ಮೂಲಕ ಮರ್ಮಾಘಾತ ನೀಡುತ್ತಿದೆ.

2013ರಲ್ಲಿ ಬಿಜೆಪಿ ಆಡಳಿತ ವೈಫಲ್ಯಗಳಿಂದ ಕಾಂಗ್ರೆಸ್ಗೆ ನಿರಾಯಾಸವಾಗಿ ಅಕಾರ ಸಿಕ್ಕಿತ್ತು. ಆಗ ಬಿಜೆಪಿಯಲ್ಲಿನ ಒಳ ಜಗಳಗಳು ಕೈಪಡೆಗೆ ಲಾಭ ಮಾಡಿಕೊಟ್ಟಿತ್ತು.

ಈ ಬಾರಿ ಆಡಳಿತ ವಿರೋ ಅಲೆಯಿದೆ, ಹಲವಾರು ವಿಷಯಗಳಲ್ಲಿ ಜನ ಬಿಜೆಪಿ ವಿರುದ್ಧ ಅಸಮಧಾನಗೊಂಡಿದ್ದಾರೆ.

ಇದೇ ಕಾಂಗ್ರೆಸ್ನ ಬಂಡವಾಳ, ಮುಂದಿನ ದಿನಗಳಲ್ಲಿ ನಾವು ನಿರಾಯಾಸವಾಗಿ ಅಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದಲ್ಲಿ ಮುಖಂಡರಿದ್ದಾರೆ.ಬಿಜೆಪಿ-ಜೆಡಿಎಸ್ನಿಂದ ಎದುರಾಗುತ್ತಿರುವ ನೈಜ ಸವಾಲುಗಳ ಬಗ್ಗೆ ಅರಿವೆ ಇಲ್ಲದಂತೆ ವರ್ತಿಸಲಾಗುತ್ತಿದೆ.

ಸಲಹೆ ಸೂಚನೆ ನೀಡುತ್ತಿರುವ ಕಾಪೆರ್ರೇಟ್ಸಂಸ್ಥೆಗಳಿಗೆ ಸ್ಥಳೀಯ ಪರಿಸ್ಥಿತಿಗಳು ಅಪರಿಚತವಾಗಿವೆ. ಹಾಗಾಗಿ ಬಹಳಷ್ಟು ಸಲಹೆಗಳು ಆರಂಭದಲ್ಲೇ ವಿಫಲವಾಗುತ್ತಿವೆ.ಹ

ಗಲು ಕನಸು ಕಾಣುತ್ತಿರುವ ಕಾಂಗ್ರೆಸ್ಗೆ ವಾಸ್ತವ ನೆಲೆಗಟ್ಟಿನ ಮೇಲೆ ರಾಜಕಾರಣ ಮಾಡುವ, ಸಾಂಪ್ರದಾಯಿಕ ಶೈಲಿ ಬಿಟ್ಟು ಆಧುನಿಕ ಸವಾಲುಗಳಿಗೆ ಅನುಗುಣವಾಗಿ ಮತದಾರರ ಮನವೊಲಿಸುವ ಪ್ರಯತ್ನಗಳು ಫಲ ನೀಡಿಲ್ಲ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button