
ಪೊಲೀಸ್ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿರುವುದು ತೃಪ್ತಿತಂದಿದೆ. ಒಂದು ವರ್ಷ ನೇಮಕಾತಿ ವಿಭಾಗದ ಡಿಜಿಯಾಗಿ ಮುಂದುವರೆಯಲು ಅವಕಾಶ ನೀಡಿರುವ ಸರ್ಕಾರಕ್ಕೆ ನಾನು ಋಣಿಯಾಗಿದ್ದೇನೆ ಎಂದು ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ನುಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತರಾಗಿ 22 ತಿಂಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಜೊತೆ ಕೆಲಸ ಮಾಡಿದ ಎಲ್ಲಾ ಸಿಬ್ಬಂದಿ ಸಹಕಾರದಿಂದ ಅದು ಸಾಧ್ಯವಾಗಿದೆ. ಅದಕ್ಕಾಗಿ ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ರಾಜ್ಯದ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆಯುಕ್ತರಾಗಿ ಕರ್ತವ್ಯದ ವೇಳೆ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸೇರಿದಂತೆ ದೊಡ್ಡಮಟ್ಟದ ಅಪರಾಧ ಪ್ರಕರಣಗಳಲ್ಲಿ ನಮ್ಮ ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ನಗರದಲ್ಲಿ ರೌಡಿ ಚಟುವಟಿಕೆ, ಮಾದಕ ದ್ರವ್ಯಗಳ ಮಾರಾಟ-ಸಾಗಾಟ ನಿಯಂತ್ರಣಕ್ಕೆ ತರಲಾಗಿದೆ. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಿಐಆರ್ ಮಾದರಿ ಜಾರಿಗೆ ತಂದಿದ್ದೇವೆ ಎಂದು ಅವರು ಹೇಳಿದರು.
ನೇಮಕಾತಿ ವಿಭಾಗದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನೇಮಕಾತಿ ವಿಭಾಗದಲ್ಲಿ ಇದುವರೆಗೂ ಕರ್ತವ್ಯ ನಿರ್ವಹಿಸಿದ ಅನುಭವವಿಲ್ಲ. ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್‍ಸಿಂಗ್, ರಾಘವೇಂದ್ರ ಔರಾದ್ಕರ್ ಸೇರಿದಂತೆ ಹಲವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಂತೆಯೇ ಮುಂದಿನ ದಿನಗಳಲ್ಲಿ ಈ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ವಿಶ್ವಾಸವಿದೆ ಎಂದು ಕಮಲ್‍ಪಂಥ್ ತಿಳಿಸಿದರು.
ಇದೇ ವೇಳೆ ಬಿಟ್‍ಕಾಯಿನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಬಿಟ್‍ಕಾಯಿನ್ ಪ್ರಕರಣದಲ್ಲಿ ಯಾವುದೇಗೊಂದಲವಿಲ್ಲ. ಕೇಂದ್ರ ತನಿಖಾ ಸಂಸ್ಥೆ ಮಾಡಬೇಕಾದ ತನಿಖೆ ಬದಲಾಗಿ ನಾವು ಮಾಡಿದ್ದೇವೆ. ಆ ಬಗ್ಗೆ ನನಗೆ ತೃಪ್ತಿಯಿದೆ. ಅಲ್ಲದೆ, ಚಂದ್ರು ಕೊಲೆ ಪ್ರಕರಣಕ್ಕೂ ವರ್ಗಾವಣೆಗೂ ಸಂಬಂಧವಿಲ್ಲ. ಯಾವುದೇ ಆರೋಪ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.