ರಾಜ್ಯ

ಪೊಲೀಸರ ಮೊಂಡಾಟ, ಸವಾರರಿಗೆ ಪೀಕಲಾಟ: ತಾಂತ್ರಿಕ ದೋಷದಿಂದ ಗಂಟೆಗಟ್ಟಲೆ ಕಾದರೂ ಸಿಗದ ಸ್ವೀಕೃತಿ

ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಏಕೀಕೃತ ಪಾವತಿಗಳ ಇಂಟರ್‌ಫೇಸ್‌ (ಯುಪಿಐ) ಮೂಲಕ ದಂಡ ಪಾವತಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಪೊಲೀಸರು ವಾಹನ ಸವಾರರನ್ನು ಗಂಟೆಗಟ್ಟಲೇ ನಡು ಬೀದಿಯಲ್ಲಿ ನಿಲ್ಲಿಸಿ ಸತಾಯಿಸುತ್ತಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಸಿಕ್ಕಿ ಬೀಳುವ ಸವಾರರಿಗೆ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಮೂಲಕ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಸವಾರರು ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಸ್ಥಳದಲ್ಲೇ ದಂಡದ ಮೊತ್ತ ಪಾವತಿಸಬಹುದಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ವಸೂಲಿಗಾಗಿ ಪೊಲೀಸರಿಗೆ ಪರ್ಸನಲ್‌ ಡಿಜಿಟಲ್‌ ಅಸಿಸ್ಟೆಂಟ್‌ (ಪಿಡಿಎ) ಉಪಕರಣ ನೀಡಲಾಗಿದೆ. ಈ ಉಪಕರಣಗಳು ಬೆಂಗಳೂರು ನಗರದ ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಬ್ಯಾಂಕ್‌ ಖಾತೆ ಸಂಖ್ಯೆಗೆ ಜೋಡಣೆಯಾಗಿವೆ.

ಸಂಚಾರ ನಿಯಮ ಉಲ್ಲಂಘಿಸಿದ ಸವಾರರು ಪಿಡಿಎ ಉಪಕರಣದ ಮೂಲಕ ಪಾವತಿಸುವ ದಂಡದ ಮೊತ್ತವು ಟಿಎಂಸಿಯ ಖಾತೆಗೆ ಜಮೆ ಆಗುತ್ತದೆ. ಆದರೆ, ಪೊಲೀಸರು ಪಿಡಿಎ ಉಪಕರಣದಲ್ಲಿ ಸ್ಕ್ಯಾ‌ನರ್‌ ಮೂಲಕ ಹಣ ಕಟ್ಟಿಸಿಕೊಳ್ಳುವಾಗ ಸಮಸ್ಯೆ ಆಗುತ್ತಿದೆ.

ಗಂಟೆಗಟ್ಟಲೇ ಕಾದರೂ ಹಣ ಸ್ವೀಕೃತವಾಗುತ್ತಿಲ್ಲ.ಪೊಲೀಸರ ಈ ತಾಂತ್ರಿಕ ಸಮಸ್ಯೆಯನ್ನೇ ನೆಪ ಮಾಡಿಕೊಂಡು ವಾಹನ ಸವಾರರನ್ನು ಬಿಟ್ಟು ಕಳುಹಿಸಲು ನಿರಾಕರಿಸುತ್ತಿದ್ದಾರೆ. ದಂಡದ ಮೊತ್ತ ಸ್ವೀಕೃತ ಆಗುವವರೆಗೂ ಇರಬೇಕೆಂದು ಹೇಳಿ ವಾಹನ ಸವಾರರನ್ನು ರಸ್ತೆಯಲ್ಲಿ ನಿಲ್ಲಿಸಿ ಕಾಯಿಸುತ್ತಿದ್ದಾರೆ.

ಆಸ್ಪತ್ರೆ, ಕಚೇರಿ ಸೇರಿದಂತೆ ವೈಯಕ್ತಿಕ ಕೆಲಸಕ್ಕೆ ಹೋಗುವ ಧಾವಂತದಲ್ಲಿರುವ ವಾಹನ ಸವಾರರು ಪೊಲೀಸರ ವರ್ತನೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಸವಾರರು ಯುಪಿಐ ಮೂಲಕ ಪಿಡಿಎ ಉಪಕರಣದಲ್ಲಿ ದಂಡ ಪಾವತಿಸಿದರೂ ಹಣ ಸ್ವೀಕೃತಿ ಪ್ರಕ್ರಿಯೆ ದಿನಗಟ್ಟಲೇ ಚಾಲನೆಯಲ್ಲಿ ಇರುವುದಾಗಿಯೇ ಸಂದೇಶ ಬರುತ್ತಿದೆ.

ಇದರಿಂದ ಹಣ ಪಾವತಿಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗದೆ ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಮತ್ತೊಂದೆಡೆ ಸಂಚಾರ ಪೊಲೀಸರಿಗೂ ಇದೇ ರೀತಿ ಗೊಂದಲವಾಗುತ್ತಿದೆ.

ದಂಡ ಸ್ವೀಕೃತಿ ಪ್ರಕ್ರಿಯೆಯಲ್ಲಿನ ತಾಂತ್ರಿಕ ಸಮಸ್ಯೆಯು ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟ ವಿಚಾರ. ಆದರೆ, ಪೊಲೀಸರು ಇದನ್ನೇ ನೆಪ ಮಾಡಿಕೊಂಡು ಸವಾರರಿಗೆ ವಿನಾಕಾರಣ ತೊಂದರೆ ಮಾಡುತ್ತಿದ್ದಾರೆ. ಸಂಚಾರ ಪೊಲೀಸರಿಗೆ ಸವಾರರ ತುರ್ತು ಪರಿಸ್ಥಿತಿಯ ಅಳಲು ಕೇಳುವ ತಾಳ್ಮೆಯೂ ಇಲ್ಲ” ಎಂದು ವಾಹನ ಸವಾರ ಮಹೇಶ್‌ ಕಿಡಿಕಾರಿದ್ದಾರೆ.

ಕಳೆದ ಕೆಲ ದಿನಗಳಿಂದ ಸರ್ವರ್‌ ಸಮಸ್ಯೆಯಿಂದಾಗಿ ಯುಪಿಐ ಸೇವೆ ಮತ್ತು ಪಿಡಿಎ ಉಪಕರಣದಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಸಮಸ್ಯೆ ಎದುರಾದಾಗಲೆಲ್ಲಾ ಟಿಎಂಸಿ ಮತ್ತು ಪೊಲೀಸ್‌ ನಿಯಂತ್ರಣ ಕೊಠಡಿಗಳಿಂದ ನಗರದ ಎಲ್ಲಾ ಸಂಚಾರ ಪೊಲೀಸ್‌ ಠಾಣೆಗಳಿಗೆ ಸಂದೇಶ ರವಾನಿಸಿ, ವಾಹನ ಸವಾರರಿಂದ ಯುಪಿಐನ ಬದಲಿಗೆ ನಗದು ರೂಪದಲ್ಲಿ ದಂಡದ ಮೊತ್ತ ಸಂಗ್ರಹಿಸುವಂತೆ ಸೂಚನೆ ನೀಡಲಾಗುತ್ತಿದೆ.

ಸವಾರರ ಬಳಿ ಹಣವಿಲ್ಲದಿದ್ದರೆ ದಂಡ ವಸೂಲಿಗಾಗಿ ಅವರಿಗೆ ಕಿರಿಕಿರಿ ಮಾಡದೆ ಬಿಟ್ಟು ಕಳುಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗುತ್ತಿದೆ. ಆದರೆ, ಸಂಚಾರ ಪೊಲೀಸರು ಈ ಸೂಚನೆ ಲೆಕ್ಕಿಸದೆ ವಾಹನ ಸವಾರರನ್ನು ರಸ್ತೆಯಲ್ಲಿ ನಿಲ್ಲಿಸಿ ಸಮಸ್ಯೆ ಮಾಡುತ್ತಿದ್ದಾರೆ.

ಪ್ರಮುಖ ವೃತ್ತ, ಜಂಕ್ಷನ್‌ಗಳಲ್ಲಿ ವಾಹನ ಸವಾರರು ದಂಡ ಪಾವತಿಗಾಗಿ ಕಾದು ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.ದಂಡ ವಸೂಲಿಗೆ ಇದೆ ಪರ್ಯಾಯ ಮಾರ್ಗಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ಬಿಟ್ಟು ಕಳುಹಿಸಿದರೂ ದಂಡ ವಸೂಲಿಗೆ ಪರ್ಯಾಯ ಮಾರ್ಗಗಳಿವೆ.

ವಾಹನದ ನೋಂದಣಿ ಸಂಖ್ಯೆ ಆಧರಿಸಿ ಸವಾರರಿಗೆ ನೋಟಿಸ್‌ ಕೊಟ್ಟು ದಂಡ ವಸೂಲಿ ಮಾಡಬಹುದು. ವಾಹನ ಜಪ್ತಿ ಮಾಡಿ ದಂಡದ ಮೊತ್ತ ಕಟ್ಟಿಸಿಕೊಳ್ಳಬಹುದು. ಸವಾರ ಭವಿಷ್ಯದಲ್ಲಿ ಮತ್ತೊಮ್ಮೆ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಾಗ ಹಿಂದಿನ ಉಲ್ಲಂಘನೆಯ ದಂಡವನ್ನು ವಸೂಲಿ ಮಾಡಬಹುದು.

ಆದರೆ, ಪೊಲೀಸರು ಈ ಪರ್ಯಾಯ ಮಾರ್ಗಗಳ ಬದಲಿಗೆ ಸ್ಥಳದಲ್ಲೇ ದಂಡ ವಸೂಲು ಮಾಡುವ ಹಟಕ್ಕೆ ಬಿದ್ದು, ಮೊಂಡಾಟ ತೋರುತ್ತಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button