
ಯುವತಿ ಮೇಲೆ ಆ್ಯಸಿಡ್ ಸುರಿದು ಪರಾರಿಯಾಗಿರುವ ಆರೋಪಿ ನಾಗೇಶನ ಬಂಧನಕ್ಕಾಗಿ ನಗರದ 10 ಮಂದಿ ಪೊಲೀಸ್ ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಹಗಲಿರುಳೆನ್ನದೆ ಹುಡುಕಾಟ ನಡೆಸುತ್ತಿದ್ದಾರೆ.ರಾಜ್ಯ, ಅಂತಾರಾಜ್ಯ ಸೇರಿದಂತೆ ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಒಂದು ತಂಡ ಆತನ ಪತ್ತೆ ಕಾರ್ಯದಲ್ಲಿ ತೊಡಗಿದೆ. ಆರೋಪಿ ಕೃತ್ಯ ವೆಸಗಿದ ನಂತರ ಮೊಬೈಲ್ ಬಳಸದ ಕಾರಣ ಬಂಧನ ಕಾರ್ಯ ವಿಳಂಬವಾಗಿದೆ.
ಆರೋಪಿಯು ಈ ಮೊದಲೇ ಹಣವನ್ನು ತೆಗೆದುಕೊಂಡು ಹೋಗಿದ್ದು, ಎಟಿಎಂ ಬಳಸುತ್ತಿಲ್ಲ. ಅಲ್ಲದೆ ತನ್ನ ಕುಟುಂಬಸ್ಥರು, ಸಂಬಂಕರು, ಸ್ನೇಹಿತರನ್ನು ಇದುವರೆಗೂ ಸಂಪರ್ಕಿಸಿಲ್ಲ. ಹಾಗಾಗಿ ಆತ ಎಲ್ಲಿ ಅಡಗಿದ್ದಾನೆ ಎಂಬ ಸುಳಿವು ಪೊಲೀಸರಿಗೆ ಸದ್ಯಕ್ಕೆ ಸಿಕ್ಕಿಲ್ಲ.
ಒಂದು ಮೂಲದ ಪ್ರಕಾರ ಆರೋಪಿ ನಾಗೇಶ ತಿರುಪತಿಗೆ ಹೋಗಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಒಂದು ತಂಡ ಅಲ್ಲಿಗೂ ಹೋಗಿ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ವಿವಿಧ ತಂಡಗಳು, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ವಿವಿಧ ಕಡೆಗಳಲ್ಲೂ ಶೋಧ ಕಾರ್ಯದಲ್ಲಿ ತೊಡಗಿವೆ.
ಆರೋಪಿ ಭಾವಚಿತ್ರವಿರುವ ಕರಪತ್ರಗಳನ್ನು ಐದು ಭಾಷೆಗಳಲ್ಲಿ ಮುದ್ರಿಸಿರುವ ತಂಡಗಳು ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಅಂಟಿಸಿ ಆತನ ಬಂಧನಕ್ಕೆ ಬಲೆ ಬೀಸಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕ ಸ್ಥಳ, ಧಾರ್ಮಿಕ ಸ್ಥಳಗಳಲ್ಲಿ ಹಂಚುವ ಮೂಲಕ ಸಾರ್ವಜನಿಕರಿಂದಲೂ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ತಂಡಗಳು ಮುಂದಾಗಿವೆ.