ಬೆಂಗಳೂರುಸಂಸ್ಕೃತಿಸಿನಿಮಾ

ಪುನೀತ್‌ ಜೀವನ ಕಥೆ ಹೇಳಲಿರುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಆಗಸ್ಟ್‌ 5ರಿಂದ

ಬೆಂಗಳೂರು (ಜು.3): ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕರ್ನಾಟಕ ರತ್ನ ದಿವಂಗತ ಡಾ . ರಾಜ್‌ಕುಮಾರ್‌ ಮತ್ತು ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜೀವನ ಕುರಿತು ಹೂವುಗಳ ಮೂಲಕ ಪ್ರದರ್ಶಿಸಲು ಊಟಿ, ಕೆಮ್ಮಣ್ಣುಗುಂಡಿ ಸೇರಿದಂತೆ ವಿವಿಧ ಭಾಗಗಳಿಂದ ಹಲವು ಬಗೆಯ ವೈವಿಧ್ಯಮಯ ಹೂವುಗಳನ್ನು ತರಿಸಲಾಗಿದೆ. ಜತೆಗೆ, ಲಾಲ್‌ಬಾಗ್‌ನಲ್ಲೇ ಬೆಳೆಸಿದ ವಿದೇಶಿ ತಳಿಯ ಅಪರೂಪದ ಹೂವುಗಳು ಪ್ರದರ್ಶನದಲ್ಲಿ ಕಣ್ಮನ ಸೆಳೆಯಲು ಸಜ್ಜಾಗುತ್ತಿದೆ. ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರದರ್ಶನ ಆಗಸ್ಟ್‌ 5ರಿಂದ 15ರವರೆಗೆ ನಡೆಯಲಿದೆ. ಇದಕ್ಕಾಗಿ ಲಾಲ್‌ಬಾಗ್‌ ಹಾಗೂ ಸುತ್ತಮುತ್ತ ಸುಮಾರು 50 ಸಾವಿರ ಹೂವಿನ ಕುಂಡಗಳು, ಜತೆಗೆ ಎಚ್‌ಎಎಲ್‌ ನರ್ಸರಿ, ಬಿಡಿಎ, ಬಿಬಿಎಂಪಿ ಮತ್ತಿತರ ಸಂಸ್ಥೆಗಳು ಪ್ರದರ್ಶನಕ್ಕೆಂದೇ ಬೆಳೆಸಿರುವ ನಾನಾ ಹೂವು, ತರಕಾರಿಗಳನ್ನು ತರಿಸಿಕೊಂಡು ಬೆಳೆಸಿದ್ದು, ಒಟ್ಟಾರೆ ಸುಮಾರು 1.25 ಲಕ್ಷಕ್ಕೂ ಹೆಚ್ಚು ಪಾಟ್‌ಗಳು ಪ್ರದರ್ಶನದಲ್ಲಿ ಜೋಡಣೆಯಾಗುತ್ತಿದ್ದು, ನೂರಾರು ಕಾರ್ಮಿಕರು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರದರ್ಶನದ ಆಕರ್ಷಣೆಗಳು: ಪ್ರದರ್ಶನದಲ್ಲಿ ರಾಜ್‌ಕುಮಾರ್‌ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪದಿಂದ ಹಿಡಿದು ಕೊನೆಯ ಚಿತ್ರದವರೆಗೆ ಹಾಗೂ ಪುನೀತ್‌ ರಾಜ್‌ಕುಮಾರ್‌ ಬಾಲನಟನಾಗಿದ್ದಂದಿನಿಂದ ಹಿಡಿದು ನಾಯಕ ನಟನಾಗಿ ಅಭಿನಯಿಸಿದ ಚಿತ್ರಗಳವರೆಗೆ ಗಾಜಿನ ಮನೆಯ 110 ಡಿಜಿಟಲ್‌ ಡಿಸ್ಲ್ಪೇ ಬೋರ್ಡ್‌ಗಳಲ್ಲಿ ಪ್ರದರ್ಶನಗೊಳ್ಳಲಿವೆ. ರಾಜ್‌ ಅವರು ಬೆಳೆದ ಗಾಜನೂರು ಮನೆ, ಪುನೀತ್‌ ಅವರು ಅನಾಥ ಮಕ್ಕಳಿಗಾಗಿ ನಿರ್ಮಿಸಿದ ಶಕ್ತಿಧಾಮದ ಪ್ರತಿಕೃತಿಗಳಿವೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ತಿಳಿಸಿದರು.

ಪ್ರವೇಶ ಶುಲ್ಕ: ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ .80, ರಜಾ ದಿನಗಳಲ್ಲಿ .100, ಮಕ್ಕಳಿಗೆ ಎಲ್ಲಾ ದಿನಗಳಲ್ಲೂ .30.

ರಾಜ್‌ ಸಮಾಧಿಯಿಂದ ಲಾಲ್‌ಬಾಗ್‌ಗೆ ಜ್ಯೋತಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಗಸ್ಟ್‌ 5ರಿಂದ ನಡೆಯಲಿರುವ ಡಾ.ರಾಜ್‌ಕುಮಾರ್‌ ಮತ್ತು ಪುನೀತ್‌ರಾಜ್‌ಕುಮಾರ್‌ ಅವರ ನೆನಪಿನಾರ್ಥ ಫಲಪುಷ್ಪ ಪ್ರದರ್ಶನಕ್ಕೆ ಇಬ್ಬರೂ ನಟರ ಸಮಾಧಿ ಸ್ಥಳದಿಂದ ಜ್ಯೋತಿ ತರಲು ನಿರ್ಧರಿಸಲಾಗಿದೆ.

ಇಬ್ಬರೂ ಮೇರು ನಟರ ಸಮಾಧಿ ಸ್ಥಳದಿಂದ ಬೆಳ್ಳಿರಥದಲ್ಲಿ ಜ್ಯೋತಿ ಹೊತ್ತು ತರಲಾಗುವುದು. ಈ ಜ್ಯೋತಿಯು ಅಲ್ಲಿಂದ ರಾಜ್‌ ಮನೆಗೆ ಹೋಗಿ, ನಂತರ ಕಾವೇರಿ ಥಿಯೇಟರ್‌ ಮೂಲಕ ವಿಧಾನಸೌಧ, ಕಬ್ಬನ್‌ಪಾರ್ಕ್ ಮಾರ್ಗವಾಗಿ ಶಾಂತಿನಗರ, ಡಬ್ಬಲ್‌ರೋಡ್‌ನಿಂದ ಲಾಲ್‌ಬಾಗ್‌ ಗೇಟ್‌ ಪ್ರವೇಶಿಸಲಿದೆ. ಅಲ್ಲಿಂದ ಅಶ್ವಾರೂಢ ರಥದಲ್ಲಿ ಉದ್ಯಾನ ಪ್ರವೇಶಿಸಲಿದೆ. ಆ ಜ್ಯೋತಿಯನ್ನು ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳು ಬರಮಾಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಬಂಧ ಸ್ಪರ್ಧೆ: ಮೈಸೂರು ಉದ್ಯಾನ ಕಲಾ ಸಂಘ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಆ.5ರಿಂದ 15ರವರೆಗೆ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಮಂಗಳವಾರ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸ್ಪರ್ಧೆ ನಡೆದಿದ್ದು, ನಗರದ ವಿವಿಧ ಭಾಗಗಳ 23 ಶಾಲೆಗಳಿಂದ 850ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು ಎಂದು ಮೈಸೂರು ಉದ್ಯಾನ ಕಲಾ ಸಂಘದ ಪದಾಧಿಕಾರಿಗಳು ವಿವರಿಸಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button