ರಾಜ್ಯ

ಪುಣ್ಯಕೋಟಿ ದತ್ತು ಯೋಜನೆ ಜಾರಿ

ಗೋಸಂಕಲವನ್ನು ಸಂರಕ್ಷಿಸಲು ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ “ಪುಣ್ಯಕೋಟಿ ದತ್ತು ಯೋಜನೆ”ಯನ್ನು ಜಾರಿ ಮಾಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.

ವಿಕಾಸಸೌಧದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷ ಪೂರೈಸುತ್ತಿರುವ ಜು. ೨೮ ರಂದು ಪುಣ್ಯಕೋಟಿ ದತ್ತು ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.

ಗೋಶಾಲೆಗಳಲ್ಲಿರುವ ಜಾನುವಾರುಗಳ ಪಾಲನೆ ಪೋಷಣೆ ಮತ್ತು ಸಂರಕ್ಷಿಸಲು ಸಾರ್ವಜನಿಕರನ್ನು ಪ್ರೇರೇಪಿಸುವುದು, ಗೋಶಾಲೆಗಳನ್ನು ಆರ್ಥಿಕವಾಗಿ ಸದೃಡಗೊಳಿಸುವುದು ಮತ್ತು ಗೋಶಾಲೆಗಳನ್ನು ಸಾರ್ವಜನಿಕರ ಸಹಕಾರದಿಂದ ನಿರಂತರವಾಗಿ ಯಾವುದೇ ಅಡಚಣೆಯಿಲ್ಲದೆ ನಡೆಸುವುದು ಈ ಯೋಜನೆಯ ಉದ್ದೇಶ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು ೨೧೫ ಕ್ಕೂ ಹೆಚ್ಚಿನ ಖಾಸಗಿ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ೧೦೦ ಸರ್ಕಾರಿ ಗೋಶಾಲೆಗಳನ್ನು ಹಂತಹಂತವಾಗಿ ಪ್ರಾರಂಭ ಮಾಡುತ್ತಿದ್ದು, ಈ ಎಲ್ಲಾ ಗೋಶಾಲೆಗಳಲ್ಲಿ ದೇಶಿತಳಿ, ಮಿಶ್ರತಳಿ ಜಾನುವಾರಗಳು, ನಿರ್ಗತಿಕ, ನಿಶ್ಯಕ್ತ, ವಯಸ್ಸಾದ, ರೋಗಗ್ರಸ್ಥ, ರೈತರು ಸಾಕಲಾಗದೆ ತಂದು ಬಿಡುವ ಜಾನುವಾರುಗಳು, ಗಂಡು ಕರುಗಳು ಮತ್ತು ನ್ಯಾಯಾಲಯ ಹಾಗೂ ಪೋಲಿಸ್ ಕಸ್ಟಡಿಯಿಂದ ವಶಪಡಿಸಿಕೊಂಡ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುತ್ತಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದರು.

ಜಾನುವಾರುಗಳ ದತ್ತು ಯೋಜನೆಯಡಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ ರೂ.೧೧,೦೦೦/- (ರೂಪಾಯಿ ಹನ್ನೊಂದು ಸಾವಿರ ಮಾತ್ರ) ಗಳನ್ನು ಪಾವತಿಸಿ ಜಾನುವಾರುಗಳನ್ನು ದತ್ತು ಪಡೆಯಬಹುದು.ಜಾನುವಾರುಗಳಿಗಾಗಿ ಆಹಾರ ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ) ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಲ್ಲಿರುವ ರಾಸುಗಳಿಗೆ ಒಂದು ದಿನಕ್ಕೆ ರೂ.೭೦/- ರಂತೆ ತಮಗೆ ಇಷ್ಟವಾದಷ್ಟು ರಾಸುಗಳಿಗೆ ಆಹಾರಕ್ಕಾಗಿ ವಂತಿಗೆ ನೀಡಬಹುದು ಎಂದು ಹೇಳಿದರು.

ಗೋಶಾಲೆಗಳಿಗೆ ದೇಣಿಗೆ ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ ರೂ.೧೦/- ಯಿಂದ ತಮ್ಮ ಶಕ್ತಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು ಎಂದು ಹೇಳಿದರು.

ಸಾರ್ವಜನಿಕರು/ಸಂಘ ಸಂಸ್ಥೆಗಳು ತಾವಿದ್ದ ಸ್ಥಳದಿಂದಲೇ ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಗೋಶಾಲೆಯಲ್ಲಿರುವ ಜಾನುವಾರುಗಳನ್ನು ದತ್ತು ಪಡೆಯುವ ನಾವೆಲ್ಲರೂ ಒಗ್ಗೂಡಿ ಗೋಸಂಕುಲ ರಕ್ಷಣೆಸೋಣ ಎಂದು ಪ್ರಭು ಚವ್ಹಾಣ್ ಇದೇ ವೇಳೆ ಮನವಿ ಮಾಡಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button