ರಾಜಕೀಯರಾಜ್ಯರಾಷ್ಟ್ರಿಯ

ಪಿಣರಾಯಿ ನಿಯೋಗಕ್ಕೆ ಬೊಮ್ಮಾಯಿ ಪರಿಸರ ಪಾಠ: ಕೇರಳದ 3 ಪ್ರಸ್ತಾವ ತಿರಸ್ಕಾರ

ಬೆಂಗಳೂರು: ಕರ್ನಾಟಕ- ಕೇರಳ ಗಡಿಯಲ್ಲಿ ರಸ್ತೆ, ರೈಲ್ವೆ ಯೋಜನೆಗೆ ಸಹಮತ ಕೋರಿ ಚರ್ಚಿಸಲು ಬಂದಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪರಿಸರದ ಮಹತ್ವದ ಬಗ್ಗೆ ಪಾಠ ಮಾಡಿದ್ದಾರೆ.

ಜತೆಗೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿಇಂಥ ಯೋಜನೆ ಕೈಗೆತ್ತಿಕೊಳ್ಳುವ ಕೇರಳದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಪಿಣರಾಯಿ ವಿಜಯನ್‌ ಮತ್ತು ಕೇರಳ ಸರಕಾರದ ಉನ್ನತಾಧಿಕಾರಿಗಳು ಸಿಎಂ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಭೇಟಿಯಾದರು.

ದಕ್ಷಿಣ ವಲಯ ಪರಿಷತ್ತಿನ ಸಭೆಯ ತೀರ್ಮಾನದಂತೆ ದ್ವಿಪಕ್ಷೀಯ ಮಾತುಕತೆಗಾಗಿ ಭೇಟಿ ನಿಗದಿಯಾಗಿತ್ತು. ಅದರಂತೆ ಕೇರಳಕ್ಕೆ ಹೆಚ್ಚು ಅನುಕೂಲವಾಗುವ ಹೆದ್ದಾರಿ ಮತ್ತು ರೈಲ್ವೆ ಯೋಜನೆ ಬಗ್ಗೆ ಚರ್ಚಿಸಲು ಪಿಣರಾಯಿ ವಿಜಯನ್‌ ಬಂದಿದ್ದರು.

ಕೇರಳ ಮುಖ್ಯಮಂತ್ರಿ ತಮ್ಮ ರಾಜ್ಯಕ್ಕೆ ಲಾಭ ತರುವ ಯೋಜನೆಗಳ ಸಂಬಂಧ ವಿವರವಾದ ಪ್ರಸ್ತಾವನೆಯೊಂದಿಗೆ ಆಗಮಿಸಿದ್ದರು. ಆದರೆ, ಇಂಥ ಯೋಜನೆಗಳ ಬಗ್ಗೆ ಕರ್ನಾಟಕದ ಮೇಲೆ ಪ್ರಭಾವ ಬೀರಲು ಸಿಎಂ ಬೊಮ್ಮಾಯಿ ಅವಕಾಶವನ್ನೇ ನೀಡಲಿಲ್ಲ.

ಬದಲಾಗಿ ಬೊಮ್ಮಾಯಿ ಅವರ ಪರಿಸರದ ಪಾಠಕ್ಕೆ ಕೇರಳದ ಉನ್ನತ ಮಟ್ಟದ ನಿಯೋಗ ತಲೆದೂಗುವಂತಾಯಿತು.

‘‘ಮರು ಪರಿಶೀಲನೆ ಮಾಡಿ. ಇನ್ನೊಮ್ಮೆ ಯೋಚಿಸಿ ನೋಡಿ,’’ ಎನ್ನುವುದು ಬಿಟ್ಟರೆ ಬೇರೇನೂ ಹೇಳಲು ಕೇರಳ ನಿಯೋಗಕ್ಕೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಕರ್ನಾಟಕ-ಕೇರಳ ಗಡಿಯ ಅರಣ್ಯ ಪ್ರದೇಶ ಅತ್ಯಂತ ಸೂಕ್ಷ್ಮವಾದದ್ದು. ಪಶ್ಚಿಮಘಟ್ಟದ ಮಹತ್ವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆ ಯಾಕಾಗುತ್ತಿದೆ ಎಂಬುದನ್ನೂ ತಿಳಿದುಕೊಳ್ಳಬೇಕು. ಕೇರಳವೂ ಸೇರಿದಂತೆ ಎಲ್ಲಕಡೆ ಅಭಿವೃದ್ಧಿಯಾಗಬೇಕು.

ಆದರೆ, ಅಭಯಾರಣ್ಯ ಮತ್ತು ರಕ್ಷಿತಾರಣ್ಯವಿರುವ ಪ್ರದೇಶಗಳನ್ನು ಇದಕ್ಕಾಗಿ ಸ್ವಾಧೀನ ಮಾಡಿಕೊಳ್ಳಬಾರದು. ಇದು ಕೇರಳ, ಕರ್ನಾಟಕಗಳ ಪ್ರಶ್ನೆಯಲ್ಲ.

ಸೂಕ್ಷ್ಮ ಸಂರಚನೆ ಹೊಂದಿರುವ ಕಾಡು ನಾಶವಾದರೆ ಅದರ ಪರಿಣಾಮವೂ ತೀವ್ರತರವಾಗಿರುತ್ತದೆ ಎಂಬುದನ್ನು ನಾನಾ ಅಧ್ಯಯನ ವರದಿಗಳ ಸಹಿತ ಸಿಎಂ ಬೊಮ್ಮಾಯಿ ಮನದಟ್ಟು ಮಾಡಿಕೊಟ್ಟರು.

ಜತೆಗೆ ಪರಿಸರದ ಕುರಿತ ಕಳಕಳಿ ಅರ್ಥ ಮಾಡಿಕೊಳ್ಳಬೇಕು. ಇಂಥ ಯೋಜನೆಗಳ ಸಂಬಂಧ ಮತ್ತೆ ಪ್ರಸ್ತಾಪ ಬೇಡವೆಂದು ಕೇರಳ ನಿಯೋಗಕ್ಕೆ ಸ್ಪಷ್ಟವಾಗಿ ಹೇಳಿದ್ದಾರೆ.

ಕಾಂಞಗಾಡ್‌-ಕಾಣಿಯೂರು ರೈಲ್ವೆ ಮಾರ್ಗ: ಇದು ಕೇರಳದಲ್ಲಿ40 ಕಿ.ಮೀ., ಕರ್ನಾಟಕದಲ್ಲಿ 31 ಕಿ.ಮೀ. ಹೊಂದಿದೆ. ರಾಜ್ಯಕ್ಕೆ ಇದರಿಂದ ಹೆಚ್ಚಿನ ಪ್ರಯೋಜನವಿಲ್ಲ.

ಜತೆಗೆ ಪಶ್ಚಿಮಘಟ್ಟದ ಜೀವ ವೈವಿಧ್ಯ ಪ್ರದೇಶದಲ್ಲಿಇದು ಹಾಯ್ದು ಹೋಗುವುದರಿಂದ ಅನುಮತಿ ನಿರಾಕರಣೆ.

ತಲೆಚೇರಿ-ಮೈಸೂರು ರೈಲ್ವೆ ಮಾರ್ಗ: ಇದು ಬಂಡಿಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯ ಭಾಗದಲ್ಲಿ ಹಾಯ್ದು ಹೋಗುವ ಕಾರಣ ಒಪ್ಪಿಗೆ ನೀಡಿಲ್ಲ.

ಇದರ ಬದಲು ಭೂಗತ ಮಾರ್ಗ ನಿರ್ಮಿಸಲು ಕೇರಳ ಸರಕಾರ ಪ್ರಸ್ತಾಪಿಸಿತಾದರೂ ಅದರಿಂದಲೂ ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ನಿರಾಕರಣೆ.

ಹೆಚ್ಚುವರಿ ಬಸ್‌: ಬಂಡಿಪುರ ರಾಷ್ಟ್ರೀಯ ಉದ್ಯಾನದ ಮೂಲಕ ರಾತ್ರಿ ವೇಳೆ ಕೇರಳಕ್ಕೆ ಸದ್ಯ 2 ಬಸ್‌ಗಳ ಸಂಚಾರವಿದೆ. ಮತ್ತೆ 2 ಬಸ್‌ ಸೇವೆ ಪ್ರಾರಂಭಿಸಲು ಕೊಟ್ಟ ಪ್ರಸ್ತಾಪ ತಿರಸ್ಕಾರ.

* ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶ, ವನ್ಯಜೀವಿಧಾಮವಿರುವ ಕಡೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ.

ಈ ಬಗ್ಗೆ ಕೇರಳ ಸರಕಾರಕ್ಕೆ ಸ್ಪಷ್ಟ ಪಡಿಸಲಾಗಿದೆ. ಅವರು ತಂದಿದ್ದ ಯೋಜನೆಗಳಿಗೆ ಒಪ್ಪಿಗೆ ಸಾಧ್ಯವಿಲ್ಲವೆಂದು ತಿಳಿಸಲಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button