ಪಿಎಸ್ಐ ಬಳಿಕ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ಬಯಲಿಗೆ!

ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪರೀಕ್ಷೆಯಲ್ಲಿ ಅಕ್ರಮ ಬಯಲಿಗೆ ಬಂದಿದೆ. ರಾಜ್ಯದಲ್ಲಿ ಪಿಎಸ್ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ನಡೆಯುತ್ತಿರುವ ಮಧ್ಯಯೇ ಮತ್ತೊಂದು ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭಾನುವಾರ ನಡೆದ ಕೆಪಿಟಿಸಿಎಲ್ನ ಕಿರಿಯ ಸಹಾಯಕರ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್’ ಬಳಸಿ ವಿದ್ಯಾರ್ಥಿಯಿಂದ ಅಕ್ರಮ ವ್ಯಸಗಿದ್ದಾನೆ.
ಈಗ ಜಿಲ್ಲಾ ಪೊಲೀಸರು ಅಕ್ರಮ ನಡೆಸಿರುವ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಮದಿಹಳ್ಳಿ (20) ಬಂಧಿತ ಅಭ್ಯರ್ಥಿಯಾಗಿದ್ದಾನೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ಕೆಪಿಟಿಸಿಎಲ್ನಲ್ಲಿ ಖಾಲಿಯಿರುವ ಕಿರಿಯ ಸಹಾಯಕರ ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಜೆಎಸ್ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಬಂಧಿತ ಅಭ್ಯರ್ಥಿ ಸಿದ್ದಪ್ಪ ಸ್ಮಾರ್ಟ್ ವಾಚ್ ಮೂಲಕ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳನ್ನು ಪೋಟೋ ತೆಗೆದು ಕಳುಹಿಸುತ್ತಿದ್ದನು.
ಬಳಿಕ ಅದೇ ಸ್ಮಾರ್ಟ್ ವಾಚ್ ಮೂಲಕ ಉತ್ತರ ಬಂದಿರುವುದನ್ನು ನೋಡಿಕೊಂಡು ಪರೀಕ್ಷೆ ಬರೆಯುತ್ತಿದ್ದನು. ಅದು ಈಗ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿಯನ್ನ ಪರಿಶೀಲನೆ ನಡೆಸಿದ ಸಿಬ್ಬಂದಿಗಳು, ಅನುಮಾನ ಗೊಂಡು ವಿಚಾರ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪರೀಕ್ಷಾ ಕೇಂದ್ರದ ಅಧಿಕಾರಿಗಳು ಗೋಕಾಕ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.