
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಪಿಎಸ್‍ಐ ನೇಮಕಾತಿ ಅಕ್ರಮ ಹಗರಣದಲ್ಲಿ ಬೆಳಗಾವಿ ಭಾಗದವರೂ ಕೂಡ ಶಾಮೀಲಾಗಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ರಾಜ್ಯ ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಬೆಳಗಾವಿ ಉತ್ತರ ವಲಯದಲ್ಲೂ ಈ ಅಕ್ರಮದಲ್ಲಿ ಭಾಗಿಯಾದವರಿದ್ದಾರೆ ಎಂಬ ಅಂಶವನ್ನು ಎಡಿಜಿಪಿ ಹೊರಹಾಕಿದ್ದಾರೆ.
ಪೊಲೀಸರು ಈ ಕುರಿತು ಕಣ್ಣಿಟ್ಟಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆದಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಬೆಳಗಾವಿಯ ಗೋಕಾಕ್ ನಗರದಲ್ಲಿ ಇಂತಹದ್ದೊಂದು ಗ್ಯಾಂಗ್ ಚಟುವಟಿಕೆಯಿಂದ ಇರುವುದು ಗಮನ ಸೆಳೆದಿದೆ. ಜೊತೆಗೆ ವಿಜಯಪುರ, ಬಾಗಲಕೋಟೆ ಜಿಲ್ಲಾಗಳಲ್ಲೂ ಪಾಲುದಾರರಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಈ ಎಲ್ಲರ ಚಲನ-ವಲನದ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದೂ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ನೇಮಕಾತಿಯಲ್ಲಿ ಗೋಕಾಕ್ ಒಂದೇ ತಾಲ್ಲೂಕಿನಿಂದ ಏಳು ಮಂದಿ ಆಯ್ಕೆಯಾಗಿದ್ದರು. ಆಗಲೇ ಅನುಮಾನ ಮೂಡಿತ್ತಾದರೂ ತನಿಖೆಯಾಗಿರಲಿಲ್ಲ. ನಂತರ ನಡೆದ ಪರೀಕ್ಷೆಯಲ್ಲಿ ಬ್ಲೂ ಟೂಥ್ ಬಳಸಿ ಪರೀಕ್ಷೆ ಬರೆಯುತ್ತಿದ್ದವರನ್ನು ಬೆಳಗಾವಿ ಪೊಲೀಸರೇ ಹಿಡಿದು ಜೈಲಿಗೆ ತಳ್ಳಿದ್ದರು.
ಇದೀಗ ಅಕ್ರಮ ನೇಮಕಾತಿ ವಿಷಯ ರಾಜ್ಯದಲ್ಲಿ ಗಂಭೀರ ಸ್ವರೂಪ ಪಡೆದಿರುವುದರಿಂದ ಬೆಳಗಾವಿ ವಲಯದಲ್ಲೂ ತೀವ್ರ ಕಣ್ಣಿಡಲಾಗಿದೆ. ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದರು.
ಕೇವಲ ಪಿಎಸ್‍ಐ ನೇಮಕಾತಿ ಹಗರಣದಲ್ಲಷ್ಟೇ ಅಲ್ಲದೆ, ಬೇರೆ ಬೇರೆ ನೇಮಕಾತಿಗಳಲ್ಲೂ ಅಕ್ರಮ ನಡೆದಿರುವ ಅನುಮಾನ ಈಗ ದಟ್ಟವಾಗಿದೆ. ತನಿಖೆ ಸರಿಯಾಗಿ ನಡೆದಲ್ಲಿ ಸಂಪೂರ್ಣ ಅಸಲಿಯತ್ತು ಬಯಲಾಗಲಿದೆ ಎಂದರು.