
ಪಿಎಸ್‍ಐ ನೇಮಕಾತಿ ಹಗರಣ ಬಗೆದಷ್ಟೂ ವಿಸ್ತಾರಗೊಳ್ಳುತ್ತಿದ್ದು, ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಂಧನದ ಭೀತಿ ಉಂಟಾಗಿದೆ.ಈಗಾಗಲೇ ಡಿವೈಎಸ್‍ಪಿ, ಇನ್ಸ್‍ಪೆಕ್ಟರ್ ಸೇರಿದಂತೆ ಏಳು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಹಗರಣಕ್ಕೆ ಸಂಬಂಸಿದಂತೆ ಅಮಾನತುಗೊಳಿಸಲಾಗಿದೆ.
ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಹಂತ ಹಂತವಾಗಿ ಮುಂದುವರೆಯುತ್ತಿದ್ದು, ಈವರೆಗೂ ಹಗರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳು, ಮಧ್ಯವರ್ತಿಗಳು ಮತ್ತು ಕಿಂಗ್‍ಪಿನ್‍ಗಳನ್ನು ಪತ್ತೆಹಚ್ಚಲು ಆದ್ಯತೆ ನೀಡಿತ್ತು.
ಈಗ ಹಗರಣಕ್ಕೆ ಕಾರಣವಾದ ತಾಂತ್ರಿಕ ಅಂಶಗಳ ಬೆನ್ನತ್ತಿದ್ದು, ಪರೀಕ್ಷಾ ಚಟುವಟಿಕೆಗಳಲ್ಲಿ ಭಾಗಿಯಾದವರ ಬೆನ್ನಹುರಿಯಲ್ಲಿ ಚಳಿ ಹಿಡಿಸಿದೆ.ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಮುಖ್ಯಸ್ಥಾನದಿಂದ ಪ್ರಶ್ನೆ ಪತ್ರಿಕೆಗಳು ರವಾನೆಯಾಗುವುದರಿಂದ ಹಿಡಿದು ಎಲ್ಲವನ್ನೂ ಹ್ಯಾಂಡಿಕ್ಯಾಮ್‍ನಲ್ಲಿ ವಿಡಿಯೋ ಚಿತ್ರೀಕರಣ ಮಾಡಬೇಕಿದೆ.
ಇದಕ್ಕಾಗಿ ಪ್ರತಿಯೊಂದು ಕೊಠಡಿಗೂ ನಿಗದಿತ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ. ಹ್ಯಾಂಡಿಕ್ಯಾಮ್ ಹಿಡಿದವರು ಪ್ರಶ್ನೆಪತ್ರಿಕೆ ತೆರೆದು ಅಭ್ಯರ್ಥಿಗಳಿಗೆ ಹಂಚುವವರೆಗೂ ಪ್ರತಿಯೊಂದನ್ನೂ ಚಿತ್ರೀಕರಿಸಬೇಕು.ನಂತರ ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳು ಒಎಂಆರ್ ಶೀಟನ್ನು ಮೇಲ್ವಿಚಾರಕ್ಕೆ ನೀಡುವುದು, ಮೇಲ್ವಿಚಾರಕರು ಪರೀಕ್ಷಾ ಕೇಂದ್ರದ ಕೇಂದ್ರೀಕೃತ ಕೊಠಡಿಗೆ ತೆಗೆದುಕೊಂಡು ಹೋಗುವುದು, ಅಲ್ಲಿಂದ ಮೌಲ್ಯಮಾಪನದ ಸ್ಥಳದವರೆಗೂ ಕಣ್ತ್‍ಪ್ಪಿಸದಂತೆ ಚಿತ್ರೀಕರಣವಾಗಬೇಕಿದೆ.
ಆದರೆ, 545 ಪಿಎಸ್‍ಐಗಳ ನೇಮಕಾತಿಗೆ ಕಳೆದ ಅಕ್ಟೋಬರ್‍ನಲ್ಲಿ ರಾಜ್ಯದ 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಾಗ ಸಾಕಷ್ಟು ಲೋಪಗಳಾಗಿವೆ ಎಂದು ತಿಳಿದು ಬಂದಿದೆ.ಪ್ರತಿ ಪರೀಕ್ಷಾ ಕೇಂದ್ರಕ್ಕೂ ಗ್ರಾಮೀಣ ಭಾಗದಲ್ಲಿ ಡಿವೈಎಸ್‍ಪಿ, ನಗರ ಪ್ರದೇಶದಲ್ಲಿ ಎಸಿಪಿ ಉಸ್ತುವಾರಿಗೆ ನಿಯೋಜಿತರಾಗಿರುತ್ತಾರೆ. ಇವರಿಗೆ ಸಹಾಯಕರಾಗಿ ಇನ್ಸ್‍ಪೆಕ್ಟರ್‍ಗಳು, ಸಬ್‍ಇನ್ಸ್‍ಪೆಕ್ಟರ್‍ಗಳು, ಎಎಸ್‍ಐಗಳು, ಕಾನ್‍ಸ್ಟೆಬಲ್‍ಗಳನ್ನು ನೀಡಲಾಗಿರುತ್ತದೆ.ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ, ನಕಲಿಯಾಗದಂತೆ, ಶಾಂತಿ ಭಂಗಗೊಳ್ಳದಂತೆ ನಿಗಾವಹಿಸುವುದು ಡಿವೈಎಸ್‍ಪಿ/ಎಸಿಪಿ ನೇತೃತ್ವದ ತಂಡದ ಜವಾಬ್ದಾರಿ.
ಈಗ ಕೇಳಿ ಬರುತ್ತಿರುವ ಹಗರಣದಲ್ಲಿ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಭಾರೀ ಅಕ್ರಮಗಳು ನಡೆದಿರುವ ವರದಿಗಳಾಗಿವೆ.
ಇದೇ ಜಿಲ್ಲೆಯ ಮತ್ತೊಂದು ಪರೀಕ್ಷಾ ಕೇಂದ್ರದಲ್ಲೂ ಬ್ಲೂಟೂತ್ ಬಳಕೆ ಮಾಡಿರುವುದು ಖಚಿತವಾಗಿದೆ. ಈ ಕೇಂದ್ರಗಳಲ್ಲಿ ನಿಯೋಜಿತರಾಗಿರುದ್ದ ಡಿವೈಎಸ್‍ಪಿ/ಎಸಿಪಿ ಹಂತ ಅಧಿಕಾರಿಗಳು ಹಾಗೂ ಇನ್ಸ್‍ಪೆಕ್ಟರ್‍ಗಳನ್ನು ನಿನ್ನೆ ಸಿಐಡಿ ವಿಚಾರಣೆಗೊಳಪಡಿಸಿದ್ದು, ಇಂದೂ ಕೂಡ ವಿಚಾರಣೆ ಮುಂದುವರೆಸಿದೆ.ಕೆಲ ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡದೆ ಲೋಪವೆಸಗಿರುವ ಮಾಹಿತಿ ಇದೆ. ಕೆಲವು ಕಡೆ ಶಿಷ್ಟಾಚಾರಗಳ ಅರಿವಿಲ್ಲದೆ ನಿರ್ಲಕ್ಷ್ಯದಿಂದ ಲೋಪವಾಗಿದ್ದರೆ, ಮತ್ತೆ ಕೆಲವುಕಡೆ ಉದ್ದೇಶಪೂರ್ವಕವಾಗಿ ಅಕ್ರಮಕ್ಕೆ ಕುಮ್ಮಕ್ಕು ನೀಡುವ ಸಲುವಾಗಿ ಚಿತ್ರೀಕರಣ ಮಾಡದಿರುವುದು ತಿಳಿದು ಬಂದಿದೆ.
ಸಿಐಡಿ ಅಧಿಕಾರಿಗಳು ಈಗ ಪ್ರತಿಯೊಂದು ಕೇಂದ್ರದಲ್ಲೂ ಪಾಲನೆಯಾಗಿರುವ ಶಿಷ್ಟಾಚಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಟಿವಿ ಕಡ್ಡಾಯವಾಗಿ ಇರಬೇಕು ಎಂಬ ಮಾಹಿತಿ ಇದೆ. ಪರೀಕ್ಷಾ ಕೇಂದ್ರಗಳ ಸಿಸಿಟಿವಿಯ ಪುಟೇಜ್‍ಗಳನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಅದರಲ್ಲಿ ಬ್ಲೂಟೂತ್ ಬಳಕೆ ಮಾಡಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ.ಒಎಂಆರ್ ಶೀಟುಗಳನ್ನು ತಿದ್ದಿರುವುದು ಹಗರಣದ ಪ್ರಮುಖ ಭಾಗವಾಗಿದ್ದು, ಹ್ಯಾಡಿಕ್ಯಾಮ್ ಚಿತ್ರಣದಲ್ಲಿ ಇದಕ್ಕೆ ಪೂರಕವಾದ ಸಾಕ್ಷ್ಯಗಳು ದೊರೆಯುವ ಸಾಧ್ಯತೆ ಇದೆ. ಸಿಐಡಿ ಅಕಾರಿಗಳು ಹಂತ ಹಂತವಾಗಿ ತಾಂತ್ರಿಕ ಹಾಗೂ ತಜ್ಞತೆಯ ತನಿಖೆಯನ್ನು ಮುಂದುವರೆಸಿದ್ದು, ಅವ್ಯವಹಾರಗಳಲ್ಲಿ ಸಹಕರಿಸಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಚಳಿ ಜ್ವರ ಬಂದಂತಾಗಿದೆ.
ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಒಮ್ಮೆ ಸಿಕ್ಕಿ ಬಿದ್ದರೆ ವೃತ್ತಿ ಜೀವನಕ್ಕೆ ಧಕ್ಕೆಯಾಗುವ ಆತಂಕ ಅನುಭವಿಸುತ್ತಿದ್ದಾರೆ.ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲಸಮಾಡಿ ಈಗ ಬೇರೆ ಕಡೆಗೆ ವರ್ಗಾವಣೆಯಾಗಿರುವ ಅಧಿಕಾರಿಗಳನ್ನೂ ಸಿಐಡಿ ವಿಚಾರಣೆ ಮಾಡುತ್ತಿದೆ.