ಅಪರಾಧಪೊಲೀಸ್

ಪಿಎಸ್ಐ ನೇಮಕಾತಿ ಹಗರಣ: ತಲೆಮರೆಸಿಕೊಂಡಿದ್ದ ‘ಕಿಲಾಡಿ ದಂಪತಿ’ ಬಂಧನ..!

ಕಲಬುರಗಿ: 545 ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಲುಕಿ ಎರಡು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಪಿಎಸ್ಐ ಅಕ್ರಮ ಪ್ರಕರಣದ ಆರೋಪಿಗಳಾದ ಶಾಂತಿ ಬಾಯಿ ಹಾಗೂ ಆಕೆಯ ಪತಿ ಬಸಯ್ಯ ನಾಯಕನನ್ನು ಕೊನೆಗೂ ಸಿಐಡಿ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ.

ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಮತ್ತೆ ಚುರುಕುಗೊಳಿಸಿದ ಸಿಐಡಿ ತಂಡ, ಆರೋಪಿಗಳನ್ನು ಒಬ್ಬೊಬ್ಬರನ್ನಾಗಿ ಬಲೆಗೆ ಕೆಡವುತ್ತಿದ್ದಾರೆ. ಅಕ್ಟೋಬರ್ 30, 2021 ರಂದು ನಡೆದ ಪಿಎಸ್ಐ ಲಿಖಿತ ಪರೀಕ್ಷೆಯ ನಂತರ, ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿತ್ತು. ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಕರಣದ ತನಿಖೆಗೆ ಆದೇಶಿಸಿದರು. ಬಳಿಕ ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಡಿ ಪೊಲೀಸರು, ಅಕ್ರಮದಲ್ಲಿ ಭಾಗಿಯಾದ 32ಕ್ಕೂ ಅಧಿಕ ಆರೋಪಿಗಳನ್ನು ಈವರೆಗೆ ಬಂಧಿಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ.

ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಸಹ ಭಾಗಿಯಾಗಿರೋದು ಕಂಡು ಬಂದಿದ್ದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಹ ಲಾಕ್ ಮಾಡಲಾಗಿದೆ. ಆದರೆ, ಪ್ರಕರಣ ಹೊರ ಬೀಳುತ್ತಿದಂತೆಯೇ ತಲೆ ಮರೆಸಿಕೊಂಡ ಆರೋಪಿ ದಂಪತಿಗಳನ್ನು ಕೊನೆಗೂ ಸಿಐಡಿ ತಂಡ ಬಂಧಿಸಿದೆ.
ಆರೋಪಿ ಶಾಂತಿ ಬಾಯಿ ಲಂಚ ಕೊಟ್ಟು ಪರೀಕ್ಷೆ ಬರೆದು ಪಾಸಾಗಿದ್ದ ಅಭ್ಯರ್ಥಿ. ಇನ್ನು ಅಕ್ರಮಕ್ಕೆ ಸಹಕರಿಸಿದ ಆರೋಪ ಆಕೆಯ ಪತಿ ಬಸಯ್ಯ ನಾಯಕನ ಮೇಲಿದೆ. ತೆಲಂಗಾಣದ ಹೈದ್ರಾಬಾದ್ನಲ್ಲಿ ದಂಪತಿಯನ್ನು ಬಂಧಿಸಿದ ಪೊಲೀಸರು, ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ.

ಅಭ್ಯರ್ಥಿ ಶಾಂತಿ ಬಾಯಿ ಪ್ರಕರಣದ ಕಿಂಗ್ ಪಿನ್ಗಳಾದ ಮಂಜುನಾಥ ಮೇಳಕುಂದಿಗೆ ಹಣ ನೀಡಿ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಹೀಗಾಗಿ, ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಹೈದ್ರಾಬಾದ್ನಲ್ಲಿ ತಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಕಳೆದ ಎರಡು ತಿಂಗಳಿನಿಂದ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದರು. ಕೊನೆಗೂ ದಂಪತಿ ಹೈದರಾಬಾದ್ನಲ್ಲಿ ಸೆರೆ ಸಿಕ್ಕಿದ್ದಾರೆ.

ಆರ್‌ಡಿ ಪಾಟೀಲ್‌‌ನ ಆಪ್ತ ಪ್ರಕಾಶ ಕಲ್ಲೂರ್‌ನನ್ನು ಎರಡು ದಿನಗಳ ಹಿಂದಷ್ಟೇ ಸಿಐಡಿ ಪೊಲೀಸರು ಬಂಧಿಸಿದ್ದರು. ಆರೋಪಿ ಪ್ರಕಾಶ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದವನು. ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಬಳಿ ಕಳೆದ ಹಲವು ವರ್ಷಗಳಿಂದ ಈತ ಕೆಲಸ ಮಾಡಿಕೊಂಡಿದ್ದ. ಪಾಟೀಲನ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿಕೊಂಡಿದ್ದ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ನಗರದ ಎಂಎಸ್‌ಐ ಡಿಗ್ರಿ ಕಾಲೇಜಿನಲ್ಲಿ ನಡೆದ ಪಿಎಸ್‌ಐ ಪರೀಕ್ಷಾ ಕೇಂದ್ರದಲ್ಲಿ ಪಾಸಾಗಿದ್ದ ಪ್ರಭು ಎಂಬ ಅಭ್ಯರ್ಥಿಗೆ ಬ್ಲೂಟೂತ್ ಡಿವೈಸ್ ನೀಡಿದ್ದ ಆರೋಪ ಪ್ರಕಾಶನ ಮೇಲಿದೆ. ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಮನೆ ಸಮೀಪದಲ್ಲಿಯೇ ಪ್ರಕಾಶ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಇನ್ನು ಪಿಎಸ್‌ಐ ಅಕ್ರಮ ಅಭ್ಯರ್ಥಿಗಳು ನೀಡುತ್ತಿದ್ದ ಹಣವನ್ನು ಆರ್‌ಡಿ ಪಾಟೀಲ್ ಡೈರೆಕ್ಟ್ ಆಗಿ ಮುಟ್ಟುತ್ತಿರಲಿಲ್ಲವಂತೆ..! ತನ್ನ ಆಪ್ತನಾದ ಪ್ರಕಾಶ ಮ‌ೂಲಕವೇ ಈತ ತನ್ನ ಕಾರ್ಯ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button