ರಾಜ್ಯ

ಪಿಎಸ್‌ಐ ನೇಮಕಾತಿ ಅಕ್ರಮ ಚಾರ್ಜ್‌ಶೀಟ್ ಬಳಿಕ ಮರುಪರೀಕ್ಷೆ : ಸೂದ್

೫೪೫ಮಂದಿ ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ (ಪಿಎಸ್‌ಐ) ಅಕ್ರಮ ತನಿಖೆಯ ಪೂರ್ಣ ಪ್ರಮಾಣದ ಚಾರ್ಜ್‌ಶೀಟ್ ಸಲ್ಲಿಕೆಯ ಬಳಿಕ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.‘ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದ ಕಾರಣಕ್ಕೆ ಸರ್ಕಾರವು ನೇಮಕಾತಿ ಪ್ರಕ್ರಿಯೆ ರದ್ದು ಪಡಿಸಿದ್ದು ಪ್ರಕರಣದ ತನಿಖೆಯು ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯ ನಂತರ ೫೪೫ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಇಲಾಖೆ ಬದ್ಧವಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಕೆಲವು ಅಭ್ಯರ್ಥಿಗಳು ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ.

ಆರೋಪಿ ಅಭ್ಯರ್ಥಿಗಳಿಗೆ ಮುಂದೆ ಯಾವುದೇ ಸ್ಮರ್ಧಾತ್ಮಕ ಪರೀಕ್ಷೆಗೆ ಅವಕಾಶ ಸಿಗದಂತೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಹೇಳಿದರು.ಮುಂದಿನ ತಿಂಗಳು ಚಾರ್ಜ್‌ಶೀಟ್ಪ್ರಕರಣ ಸಂಬಂಧ ತನಿಖೆ ಮಾಡುತ್ತಿರುವ ಸಿಐಡಿ ಅಕ್ಟೋಬರ್‌ನಲ್ಲಿ ದೋಷಾರೋಪ ಪಟ್ಟಿಸಲ್ಲಿಸಲಿದೆ ಎಂದು ಹೇಳಿದ ಸೂದ್, ಸಿಐಡಿ ೯೦ ದಿನಗಳೊಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಿದೆ.ಸಿಐಡಿ ತನಿಖೆ ಮುಗಿಯುವವರೆಗೂ ಮರು ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ. ಸಿಐಡಿ ಸ್ವತಂತ್ರ ತನಿಖಾ ಸಂಸ್ಥೆಯಾಗಿರುವುದರಿಂದ ತನಿಖೆ ಬಗ್ಗೆ ಈ ಹಂತದಲ್ಲಿ ಯಾವುದೇ ಮಾಹಿತಿ ನೀಡುವುದು ಸರಿಯಲ್ಲ.

ಆರೋಪಿಗಳ ವಿರುದ್ಧ ಸಾಕ್ಷ್ಯ ಸಿಗದಿದ್ದಲ್ಲಿ ಆರೋಪ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಹಂತದಲ್ಲಿ ಯಾರ ಬಗ್ಗೆಯೂ ಮಾತನಾಡುವುದು ತಪ್ಪಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button