ಪಿಎಸ್‌ಐ ನೇಮಕಾತಿ:ಆಡಿಯೋ ಧ್ವನಿ ನನ್ನದಲ್ಲ ಉಲ್ಟಾ ಹೊಡೆದ ಶಾಸಕ

ಪಿಎಸ್‌ಐ ನೇಮಕಾತಿ ಹಗರಣ ಕುರಿತಂತೆ ಆಡಿಯೋದಲ್ಲಿ ದಾಖಲಾಗಿರುವ ಧ್ವನಿ ತಮ್ಮದಲ್ಲ ಎಂದು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸಗೂರು ಸ್ಪಷ್ಟೀಕರಣ ನೀಡಿದ್ದಾರೆ.
ಅಕ್ರಮದಲ್ಲಿ ಸಿಲುಕಿಸಿ ತಮ್ಮ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಸ್ನೇಹಿತರಾಗಿದ್ದು ಯಾವ ದಾಖಲೆ ಬಿಡುಗಡೆ ಮಾಡುತ್ತಾರೋ ಮಾಡಲಿ.
ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಈ ಸಂಬಂಧ ತಾವು ಕೂಡ ಎಲ್ಲ ದಾಖಲೆಗಳನ್ನು ಹೊಂದಿರುವುದಾಗಿ ಹೇಳಿದರು.ತಾವು ಮಾತನಾಡಿರುವ ಆಡಿಯೋ ಎಡಿಟ್ ಮಾಡಿ ಪಿಎಸ್‌ಐ ಹಗರಣಕ್ಕೆ ಜೋಡಣೆ ಮಾಡಲಾಗಿದೆ. ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ.
ಸಿಡಿಯು ತಮ್ಮ ಬಳಿಯಿದೆ. ಸದಸನದಲ್ಲಿ ಈ ವಿಚಾರ ಪ್ರಸ್ತಾಪವಾದರೆ ಉತ್ತರ ಕೊಡುವುದಾಗಿ ತಿಳಿಸಿದರು.ಪ್ರಿಯಾಂಕ್ ಖರ್ಗೆಯವರು ಅಮೃತ ಘಳಿಗೆಯಲ್ಲಿ ಆಡಿಯೋ, ವಿಡೀಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಮಾಡಲಿ ಸಮಸ್ಯೆಯಿಲ್ಲ. ತಾವು ಯಾವುದೇ ಹಣ ಪಡೆದಿಲ್ಲ.
ಸರ್ಕಾರಕ್ಕೂ ಹಣ ತಲುಪಿಸಿಲ್ಲ ಎಂದರು.ಪಿಎಸ್‌ಐ ಅಕ್ರಮದಲ್ಲಿ ಬಸವರಾಜು ಅವರು ಆಡಿಯೋ ವೈರಲ್ ವಿಚಾರವಾಗಿ ಆಡಿಯೋ ಬಿಡುಗಡೆಯಾದ ಬಳಿಕ ಹಣ ವಾಪಸ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಪರಸಪ್ಪ ಮೇಗೂರ ಎಂಬುವರ ಬಳಿ ೧೫ ಲಕ್ಷ ಹಣ ಪಡೆದಿದ್ದ ಬಗ್ಗೆ ಬಸವರಾಜು ಆಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.
೧೫ ಲಕ್ಷ ರೂ. ಹಣ ಪಡೆದು ಸರ್ಕಾರಕ್ಕೆ ಹಣ ಕೊಟ್ಟಿರುವುದಾಗಿ ಹೇಳಿದ್ದರು. ಆದರೆ ಈಗ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.