
ಕಾರು ಪಾರ್ಕಿಂಗ್ ವಿಷಯವಾಗಿ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದ್ದು, ಬಳಿಕ ನಡೆದ ಹಿಂಸಾಚಾರದಲ್ಲಿ ಕಾರು, ಟ್ರ್ಯಾಕ್ಟರ್, ಟೆಂಪೋ ಸೇರಿದಂತೆ ಹತ್ತಾರು ವಾಹನಗಳು ಮತ್ತು ಹುಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಹೊರವಲಯದ ಗೌಂಡವಾಡ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಕಾರು ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿ ರಾತ್ರಿ 9ರ ಸುಮಾರಿಗೆ ಗ್ರಾಮದ ಸತೀಶ್ ಪಾಟೀಲ್ (37) ಎಂಬುವವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.ಈ ಘಟನೆಯಿಂದ ಗೌಂಡವಾಡ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಕೆರಳಿದ ಕಿಡಿಗೇಡಿಗಳು ಕಂಡಕಂಡಲ್ಲಿ ವಾಹನಗಳಿಗೆ, ಹುಲ್ಲಿನ ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ.
ನಾಲ್ಕು ಕಾರು, ಒಂದು ಟ್ರ್ಯಾಕ್ಟರ್ ಹಾಗೂ ಎರಡು ಟೆಂಪೋ ಸುಟ್ಟು ಕರಕಲಾಗಿವೆ. ಅಲ್ಲದೆ, ಉದ್ರಿಕ್ತರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಮನೆಗಳಿಗೂ ಸಹ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಳಗಿನ ಜಾವದವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಈ ಘಟನೆಯಿಂದ ಭೀತಿಗೊಳಗಾದ ಗ್ರಾಮದ ಹಲವರು ರಾತ್ರೋರಾತ್ರಿಯೇ ಊರು ತೊರೆದಿದ್ದಾರೆ. ದೇವಸ್ಥಾನದ ಜಮೀನು ವಿವಾದವೊಂದರಲ್ಲಿ ಪರಸ್ಪರ ದ್ವೇಷ, ತಡರಾತ್ರಿ ವಾಹನ ಪಾರ್ಕಿಂಗ್ ವಿಷಯವಾಗಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಹಿಂಸಾಚಾರ ಉಂಟಾಗಿತ್ತು.
ಗೌಂಡವಾಡದಲ್ಲಿ ಪರಿಸ್ಥಿತಿ ನಿಯಂತ್ರಣ: ನಗರ ಪೋಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ಘಟನೆ ಕುರಿತು ಪ್ರತಿಕ್ರಿಯಿಸಿ, ಗೌಂಡವಾಡ ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಗೆ ಸಂಬಂಸಿದಂತೆ ಐವರು ಆರೋಪಿಗಳು ಹಾಗೂ ದೊಂಬಿ ನಡೆಸಿದ 15 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿ ನಡೆದ ಕೊಲೆ ಇಬ್ಬರು ವ್ಯಕ್ತಿಗಳ ಮಧ್ಯೆ ಕಾರು ಪಾರ್ಕಿಂಗ್ ಮಾಡುವುದಕ್ಕೆ ಸಂಬಂಧಿಸಿದೆ. ಮೇಲ್ನೋಟಕ್ಕೆ ಹಳೆ ದ್ವೇಷ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಗ್ರಾಮದ ಬೋರೇನಾಥ ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ವ್ಯಕ್ತಿಯೊಬ್ಬರು ಮನೆ ಕಟ್ಟಿದ್ದಾರೆ ಎಂದು ಆರೋಪಿಸಿ ಈ ಗ್ರಾಮದಲ್ಲಿ ಐದು ವರ್ಷಗಳಿಂದ ವಿವಾದ ನಡೆದಿತ್ತು. ಎರಡು ಸಮುದಾಯಗಳ ನಡುವೆ ಜಗಳ ಕೂಡ ಏರ್ಪಟ್ಟಿತ್ತು. ಗ್ರಾಮದ ಹಿರಿಯರು ರಾಜಿ-ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಿದ್ದರು. ಈ ಸಮಸ್ಯೆ ಮತ್ತೆ ತಲೆದೋರಿತ್ತು. ನಿನ್ನೆ ಈ ವಿವಾದದ ಬಗ್ಗೆ ಮತ್ತೆ ವ್ಯಾಜ್ಯ ನಡೆದಿದೆ. ಈ ಸಂದರ್ಭದಲ್ಲಿ ಉಂಟಾದ ಜಗಳದಲ್ಲಿ ಯುವಕನ ಕೊಲೆಯಾಗಿ ಹಿಂಸಾಚಾರ ನಡೆದು ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿ ಕೆಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು, ಹಿರಿಯ ಅಧಿಕಾರಿಗಳು ಗ್ರಾಮದಲ್ಲೇ ಬೀಡುಬಿಟ್ಟಿದ್ದು, ಗಾಳಿಮಾತಿಗೆ ಕಿವಿಗೊಡದಂತೆ ಸಂಯಮದಿಂದ ವರ್ತಿಸಬೇಕೆಂದು ಪೊಲೀಸ್ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.