ಪಶ್ಚಿಮ ವಲಯ ಪೊಲೀಸರ ಯಶಸ್ವಿ ಕಾರ್ಯಾಚರಣೆ : 86 ಲಕ್ಷ ಮೌಲ್ಯದ ಮೊಬೈಲ್‍ಗಳ ವಶ

ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಂದು ತಿಂಗಳಿನಿಂದ ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಕಳ್ಳತನ ಹಾಗೂ ಮೊಬೈಲ್ ಸುಲಿಗೆ ಮಾಡುತ್ತಿದ್ದ 105 ಮಂದಿ ಆರೋಪಿಗಳನ್ನು ಬಂಧಿಸಿ 86 ಲಕ್ಷ ರೂ.
ಮೌಲ್ಯದ 928 ವಿವಿಧ ಮಾದರಿಯ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಕೇಂದ್ರ ವಿಭಾಗದ ಪೊಲೀಸರು 30 ಮಂದಿ ಆರೋಪಿಗಳನ್ನು ಬಂಧಿಸಿ 121 ಮೊಬೈಲ್‍ಗಳನ್ನು ವಶಪಡಿಸಿಕೊಂಡರೆ, ಪಶ್ಚಿಮ ವಿಭಾಗದ ಪೊಲೀಸರು 30 ಆರೋಪಿಗಳನ್ನು ಬಂಧಿಸಿ 334 ಮೊಬೈಲ್‍ಗಳು, ದಕ್ಷಿಣ ವಿಭಾಗದ ಪೊಲೀಸರು 33 ಆರೋಪಿಗಳನ್ನು ಬಂಧಿಸಿ 342 ಮೊಬೈಲ್‍ಗಳು ಹಾಗೂ ಉತ್ತರ ವಿಭಾಗದ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿ 131 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ನಗರದಲ್ಲಿ ಮೊಬೈಲ್ ಕಳ್ಳತನ, ಸುಲಿಗೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳಲು ಎಲ್ಲ ವಿಭಾಗಗಳ ಪೊಲೀಸರಿಗೆ ಸೂಚಿಸಿದ್ದರು.
ಅದರನ್ವಯ ನಾಲ್ಕು ವಿಭಾಗಗಳ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಈವರೆಗೆ ಬೇರೆ ಬೇರೆ ಪ್ರಕರಣಗಳಲ್ಲಿ 105 ಮಂದಿ ಆರೋಪಿಗಳನ್ನು ಬಂಧಿಸಿ ಕಳವು, ಸುಲಿಗೆ ಮಾಡಿದ್ದ ವಿವಿಧ ಮಾದರಿಯ 928 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರು ಮೊಬೈಲ್‍ನಲ್ಲಿ ಮಾತನಾಡುತ್ತ ಹೋಗುವಾಗ ಆರೋಪಿಗಳು ಹಿಂಬಾಲಿಸಿ ಅವರ ಕೈಯಿಂದ ಮೊಬೈಲ್ ಎಗರಿಸುವುದು, ಒಂಟಿಯಾಗಿ ನಡೆದು ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಸುಲಿಗೆ ಮಾಡುವ ಪ್ರವೃತ್ತಿ ಹೊಂದಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ನಾಲ್ಕು ವಿಭಾಗಗಳ ಉಪ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ ಅೀಧಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಡೆಸಿದ ವಿಶೇಷ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರು ಶ್ಲಾಘಿಸಿದ್ದಾರೆ.