ಪತ್ನಿ, ಪುತ್ರನ ಕೊಂದ ಪಾಪಿ ತಂದೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಹೆಂಡತಿ ಹಾಗೂ ಪುತ್ರನನ್ನು ಆರೆಯಿಂದ ತಲೆಗೆ ಒಡೆದು ಭೀಕರವಾಗಿ ಕೊಲೆಗೈದಿರುವ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾವಿನಹಳ್ಳಿ ಗ್ರಾಮದ ನಿವಾಸಿ ಸ್ವಾಮಿ (೩೩) ಎಂಬಾತನೇ ಪತ್ನಿ ಮತ್ತು ಪುತ್ರನನ್ನು ಕೊಲೆಗೈದಿರುವ ಆರೋಪಿ. ಪತ್ನಿ ಕಾವ್ಯ (೨೫) ಹಾಗೂ ಪುತ್ರ ಜೀವನ್ (೪) ಎಂಬುವರೇ ಕೊಲೆಯಾಗಿರುವ ದುರ್ದೈವಿಗಳು.ಕೈ ಸಿಕ್ಕ ಆರೆಯಿಂದ ಆರೋಪಿ ಸ್ವಾಮಿ ತನ್ನ ಪತ್ನಿ ಮಗುವಿನ ತಲೆಗೆ ಬಲವಾಗಿ ಒಡೆದು ಕೊಲೆ ಮಾಡಿದ್ದಾನೆ.
ರಕ್ತಸಿಕ್ತವಾಗಿ ಮನೆಯಲ್ಲಿ ಬಿದ್ದಿದ್ದ ತಾಯಿ ಮಗನ ಶವವನ್ನು ಕಂಡು ಇಡೀ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಸ್ವಾಮಿಯನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಚೇಳೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಕೊಲೆಯಾಗಿರುವ ಹಸುಗೂಸು ಹಾಗೂ ತಾಯಿಯ ಶವ ಬಿದ್ದಿರುವ ದೃಶ್ಯ ಎಂತಹವರಿಗೂ ಮನಕಲಕುವಂತಿದೆ.
ಪಾಪ ಇನ್ನು ಜಗತ್ತು ಏನೆಂಬುದನ್ನೆ ಅರಿಯದ ಹಸುಗೂಸನ್ನು ಕೊಲೆಗೈದಿರುವ ಆರೋಪಿ ವಿರುದ್ಧ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದೆ.ಕಳೆದ ೬ ವರ್ಷಗಳ ಹಿಂದೆ ಮದುವೆಯಾಗಿದ್ದ ಸ್ವಾಮಿ ಮತ್ತು ಕಾವ್ಯ ನಡುವೆ ಜಗಳವಾಗಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಕಾವ್ಯ ಮನೆ ಬಿಟ್ಟು ಹೋಗಿದ್ದರು.
ಮತ್ತೆ ರಾಜಿ ಪಂಚಾಯ್ತಿ ನಡೆಸಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕಾವ್ಯ ಪತಿಯ ಮನೆಗೆ ಬಂದಿದ್ದರು ಎನ್ನಲಾಗಿದೆ.ನಾಲ್ಕು ವರ್ಷಗಳ ಬಳಿಕ ಒಂದಾಗಿದ್ದ ದಂಪತಿ ನಡುವೆ ಪುನಃ ಜಗಳ ಪ್ರಾರಂಭವಾಗಿದ್ದು, ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಪತಿ ಸ್ವಾಮಿ, ಆರೆಯಿಂದ ಪತ್ನಿ ಹಾಗೂ ಮಗುವಿನ ತಲೆ ಒಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಈ ಕೊಲೆಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದ ಆರೋಪಿ ಸ್ವಾಮಿಯನ್ನು ಇತ್ತೀಚೆಗಷ್ಟೆ ಅರ್ಚಕ ವೃತ್ತಿಯಿಂದ ತೆಗೆಯಲಾಗಿತ್ತು. ನಂತರದಲ್ಲಿ ತಿರುಗಾಡಿಕೊಂಡಿದ್ದ ಸ್ವಾಮಿ ತನ್ನ ಕುಟುಂಬದೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಸ್ಥಳೀಯರು ಹೇಳುತ್ತಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಚೇಳೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸ್ವಾಮಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಗುಬ್ಬಿ ಸರ್ಕಲ್ ಇನ್ಸ್‌ಪೆಕ್ಟರ್ ನದಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.