
ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಪತ್ನಿಯನ್ನು ಕೊಂದು ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ ಪತಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೋಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಆಲೂರು ಗ್ರಾಮದ ಶ್ವೇತ (30)ಕೊಲೆಯಾದ ಮಹಿಳೆ.
ಹಿರಿಯೂರು ತಾಲೂಕು ಕುರುಬರಹಳ್ಳಿ ಗ್ರಾಮದ ಚೌಡೇಶ್ (35) 9 ವರ್ಷಗಳ ಹಿಂದೆ ಶ್ವೇತಾರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನೆಲಮಂಗಲ ಸಮೀಪದ ತೋಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ತೋಣಚಿನಕುಪ್ಪೆ ಗ್ರಾಮದ ಬಾರೊಂದರಲ್ಲಿ ಕ್ಯಾಶಿಯರ್ ಆಗಿದ್ದ ಚೌಡೇಶ್ 3 ವರ್ಷಗಳ ಹಿಂದೆ ನಿವೇಶನ ಖರೀದಿಸಿ ಸ್ವಂತ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು.
ಇದ್ದಕ್ಕಿದ್ದಂತೆ ಮೊನ್ನೆ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ವೇತಾಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಮನೆಯಲ್ಲಿ ಕುಸಿದುಬಿದ್ದಿದ್ದಾರೆ ಎಂದು ಚೌಡೇಶ್ ತಿಳಿಸಿದ್ದಾನೆ.ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ ರಿಂದ ಶವವನ್ನು ಮನೆಗೆ ಕೊಂಡೊಯ್ದು ಬಳಿಕ ಪತ್ನಿ ಮೃತಪಟ್ಟಿರುವ ವಿಷಯವನ್ನ ಶ್ವೇತಾಳ ಪೋ ಷಕರಿಗೆ ತಿಳಿಸಿದ್ದಾನೆ.
ಪೋಷಕರು ಬಂದು ನೋಡಲಾಗಿ ಶವದ ಮೇಲೆ ಗಾಯದ ಕುರುಹುಗಳು ಕಂಡು ಬಂದ ಹಿನ್ನೆಲೆಯಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆ ಹಾಗೂ ವೈದ್ಯರ ಮಾಹಿತಿ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಚೌಡೇಶ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.