ರಾಜ್ಯ

ಪಠ್ಯ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ

kavishaila to Thirthahalli text revision

ಬಹುತ್ವದ ವಿರೋ ಧೋರಣೆ ಮನೋಭಾವದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯ ಪರಿಷ್ಕರಣೆಯನ್ನು ರದ್ದುಗೊಳಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯವನ್ನೇ ಮುಂದುವರೆಸಬೇಕೆಂದು ಆಗ್ರಹಿಸಿ ಕವಿಶೈಲ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಸಾಹಿತಿಗಳು, ಬುದ್ದಿಜೀವಿಗಳು, ವಿದ್ವಾಂಸರು, ಸರ್ವ ಸಂಘಟನೆಗಳು, ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಠ್ಯ ಪರಿಷ್ಕರಣೆ ಸಮಿತಿಯಿಂದ ಆಗಿರುವ ಪಠ್ಯ ಪುಸ್ತಕ ಅಪಮೌಲೀಕರಣ, ವೈದೀಕರಣ, ಅಸಮಾನತೆ, ನಾಡಗೀತೆಗೆ ಅಪಮಾನ, ರಾಷ್ಟ್ರ ಕವಿ ಕುವೆಂಪುಗೆ ಅವಹೇಳನ, ಬಸವಣ್ಣ ಡಾ.ಬಿ.ಆರ್.ಅಂಬೇಡ್ಕರ್, ಶಂಕರಾಚಾರ್ಯರಿಗೆ ಅಗೌರವ ತೋರಿರುವ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮತ್ತು ಅದನ್ನು ಬೆಂಬಲಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕವಿಶೈಲದಲ್ಲಿ ಮೊಳಗಿದ ಕಹಳೆಯಲ್ಲಿ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ಸ್ಥಳೀಯ ಜನಪ್ರತಿನಿಧಿಗಳು, ಅಪಾರಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮೊದಲು ಕುಪ್ಪಳಿಯ ಕವಿಶೈಲದಲ್ಲಿ ಕುವೆಂಪು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಆರಂಭಿಸಲಾಯಿತು. ಹಳ್ಳಿಗಳಿಂದ ಜನ ಪಾದಯಾತ್ರೆಗೆ ಬಂದು ಸೇರಿ ಚಕ್ರತೀರ್ಥ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪಾದಯಾತ್ರೆ ಆರಂಭದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು , ಸರ್ಕಾರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಪಠ್ಯ ಪರಿಷ್ಕರಣೆಯನ್ನು ಕೂಡಲೇ ಹಿಂತೆಗೆದುಕೊಂಡು ಈ ಹಿಂದೆ ಮಾಡಿದ ಬರಗೂರು ನೇತೃತ್ವದ ಸಮಿತಿಯ ಪಠ್ಯವನ್ನೇ ಮುಂದುವರೆಸಬೇಕು. ಇದಕ್ಕಾಗಿ ನಾಡಿನಾದ್ಯಂತ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಉದ್ದಟತನ ಮೆರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಎಲ್ಲ ಸಂಸ್ಕøತಿಯ ಎಲ್ಲ ವರ್ಗದ ಜನರಿದ್ದಾರೆ. ಆದರೆ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯದಲ್ಲಿ ಬಹುತ್ವವನ್ನು ವಿರೋಧಿಸಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದೆ. ಸಾಹಿತ್ಯ ದಿಗ್ಗಜರಿಗೆ ಅವಮಾನ ಮಾಡಿದೆ. ನಾಡಿನ ಅಸ್ಮಿತೆಯಾದ ಬಸವಣ್ಣ, ಕುವೆಂಪು ಅವರನ್ನು ಅವಮಾನ ಮಾಡಿರುವ ಚಕ್ರತೀರ್ಥ ನಾಡಗೀತೆಯ ಬಗ್ಗೆ ಅವಹೇಳನಕಾರಿಯಾಗಿ ನಡೆದುಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಆತನ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತಷ್ಟು ಉಗ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಅಪಮೌಲೀಕರಣ ಮಾಡಲಾಗಿದೆ. ಸಾಹಿತಿಗಳು ನಾಡದಿಗ್ಗಜರ ಪಠ್ಯಗಳನ್ನು ಕೈಬಿಟ್ಟು ಸಂಘ ಪರಿವಾರದ ಪಠ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಇದು ಬಹುತ್ವಕ್ಕೆ ವಿರೋಧವಾಗಿದೆ. ಇಷ್ಟೆಲ್ಲ ಆದರೂ ಕೂಡ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಗುಡುಗಿದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ನಮಗೆ ಮಹಾಮನೆ ಕಲ್ಯಾಣ, ಗುರುಮನೆ ಕುಪ್ಪಳ್ಳಿ. ಈ ಗುರುಮನೆಯಿಂದ ನಾವು ಕಹಳೆಯನ್ನು ಊದುತ್ತಿದ್ದೇವೆ. ಅದು ಕುಪ್ಪಳ್ಳಿ ಕಹಳೆ. ಅಂದು ಕನ್ನಡಕ್ಕಾಗಿ ಗೋಕಾಕ್ ಚಳುವಳಿ ಆರಂಭವಾಗಿತ್ತು. ಇಂದು ಕನ್ನಡಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಕುಪ್ಪಳಿಯಿಂದ ಕನ್ನಡ ಕಹಳೆ ಮೊಳಗಿದೆ.

ಬಸವ ಅಂದರೆ ಕನ್ನಡ. ಕುವೆಂಪು ಅಂದರೆ ಕನ್ನಡ. ಎರಡಕ್ಕೂ ಅವಮಾನವಾದರೆ ಸಹಿಸಲು ಸಾಧ್ಯವಿಲ್ಲ. ನಮ್ಮ ನಾಡೇ ಒಂದು ಗೀತೆ ಇಂತಹ ನಾಡಗೀತೆಗೆ ಅವಮಾನ ಮಾಡಲಾಗಿದೆ. ಕನ್ನಡದ ನಡ ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ಇದರ ವಿರುದ್ಧ ನಾವು 100 ವರ್ಷಗಳು ಹೋರಾಟ ಮಾಡಬೇಕು. ನಮ್ಮನ್ನು ಭಾಷಾಂಧರು ಎಂದರೂ ಸರಿ. ತಮಿಳರ ಮಾದರಿಯಲ್ಲಿ ನಾವು ಹೋರಾಟ ಮಾಡಬೇಕಾಗಿದೆ.

ತಮಿಳುನಾಡಿನಲ್ಲಿ ಭಾಷೆಗೆ ಕೊಂಚ ಎಡವಟ್ಟಾದರೂ ಆಳುವವರು ಮತ್ತು ವಿರೋಧ ಪಕ್ಷದವರು ಒಗ್ಗಟ್ಟಾಗಿ ಹೋರಾಟ ಮಾಡುತ್ತಾರೆ. ನಮಗೆ ಯಾವ ಪಕ್ಷವಿಲ್ಲ. ನಮ್ಮದು ಕವಿ ಪಕ್ಷ. ಕುಪ್ಪಳ್ಳಿಯಿಂದ ಕನ್ನಡದ ಕಹಳೆ ಶುರುವಾಗಿದೆ. ಎಚ್ಚೆತ್ತುಕೊಂಡು ವ್ಯವಸ್ಥೆ ಸರಿಪಡಿಸದಿದ್ದರೆ ಕಹಳೆ ಮತ್ತೆ ಮತ್ತೆ ಮೊಳಗಲಿದೆ ಎಂದು ಹೇಳಿದರು.

ಸಾಹಿತಿ ಸಿದ್ದರಾಮಯ್ಯ ಮಾತನಾಡಿ, ನಾವು ಮೊದಲಿನಿಂದಲೂ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ಹೋರಾಟ ಮಾಡುತ್ತಾ ಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೋಹಿತ್ ಚಕ್ರತೀರ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಹಲವು ಗಣ್ಯರು ಪಾಲ್ಗೊಂಡು ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬರಗೂರು ಸಮಿತಿಯ ಪಠ್ಯ ಮುಂದುವರೆಸಬೇಕೆಂದು ಒತ್ತಾಯಿಸಿದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button