ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ವಿಧಾನಸೌದದ ಆವರಣದಲ್ಲಿ ಕಾಂಗ್ರೆಸ್ ಧರಣಿ

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಮಹನೀಯರಿಗೆ, ದಾರ್ಶನಿಕರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ವಿಧಾನಸೌದದ ಆವರಣದಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆ ಎದುರು ಇಂದು ಬಿಜೆಪಿ ಸರ್ಕಾರದ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿತ್ತು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಹಿರಿಯ ನಾಯಕರು, ಕಾಂಗ್ರೆಸ್‍ನ ಶಾಸಕರು, ವಿಧಾನ ಪರಿಷತ್ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು.
ಧರಣಿ ನಿರತ ಶಾಸಕರು ನಿರಂತರ ಧಿಕ್ಕಾರ, ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಮನುವಾದ, ಕೇಸರಿಕರಣ, ನಾಗ್ಪುರ ಮತ್ತು ಆರ್‍ಎಸ್‍ಎಸ್ ಬೆಂಬಲಿತ ಪಠ್ಯ ಕ್ರಮ ಬೇಡ, ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಕನಕದಾಸರು ಬೇಕು ಆರ್‍ಎಸ್‍ಎಸ್ ಬೇಡ.ದಾರ್ಶನಿಕರನ್ನು, ಮಹಾತ್ಮರನ್ನು ಅಪಮಾನ ಮಾಡಿದ ಮನುವಾದಿ ಪಠ್ಯ ಪರಿಷ್ಕರಣಾ ಸಮಿತಿಯ ಎಲ್ಲಾ ಪರಿಷ್ಕರಣೆಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ರೈತ, ಮಹಿಳೆಯರನ್ನು ಅವಮಾನಿಸಿದ, ಜನ ವಿರೋಧಿ ಚಡ್ಡಿ ಸರ್ಕಾರಕ್ಕೆ ಧಿಕ್ಕಾರ. ಪಠ್ಯ ಪರಿಷ್ಕರಣೆಯ ಮೂಲಕ ವಿಷ ಬೀಜ ಬಿತ್ತಿ, ಮಕ್ಕಳ ಮನಸ್ಸನ್ನು ಕೆಡಿಸಲಾಗುತ್ತಿದೆ.
ಸುರಪುರ ನಾಯಕರಿಗೆ ಅವಮಾನ ಮಾಡಲಾಗಿದೆ, ಇತಿಹಾಸ ತಿರುಚಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶೇ.40 ಕಮಿಷನ್ ಸರ್ಕಾರಕ್ಕೆ, ಲಂಚ-ಮಂಚದ ಸರ್ಕಾರಕ್ಕೆ, ವಿದ್ಯಾರ್ಥಿ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸರ್ಕಾರ ಆರ್‍ಎಸ್‍ಎಸ್ ಕೈಗೊಂಬೆಯಂತೆ ವರ್ತಿಸುತ್ತಿದೆ.
ಶಿಕ್ಷಣ ಸಚಿವರು ಮನುವಾದಿಯಾಗಿದ್ದಾರೆ, ಕನ್ನಡ ವಿರೋಧಿ ಮನಸ್ಥಿತಿಯವನಿಗೆ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪಠ್ಯದಲ್ಲಿ ಕುವೆಂಪು, ಕನಕದಾಸರು, ಮಹಾವೀರರು, ಬುದ್ಧ, ಅಂಬೇಡ್ಕರ್, ಕನಕದಾಸರರು ಬೇಕು, ಆರ್‍ಎಸ್‍ಎಸ್ ಬೇಡ ಎಂದು ಆಗ್ರಹಿಸಿದರು.