Uncategorized

ಪಠ್ಯಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನು ಬಂಧಿಸಿ, ನಷ್ಟ ವಸೂಲಿ ಮಾಡಲು ಸಿದ್ದರಾಮಯ್ಯ ಆಗ್ರಹ

ಸ್ಪಷ್ಟವಾದ ಸರ್ಕಾರಿ ಆದೇಶವಿಲ್ಲದೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಒಬ್ಬ ಕಿಡಿಗೇಡಿ ಟ್ರೋಲರ್ ನಿಗೆ ಅವಕಾಶ ನೀಡಿ, ಈಗ ಆತ ಮಾಡಿಟ್ಟಿರುವ ಕೊಳಕುಗಳನ್ನೆಲ್ಲ ತಲೆಮೇಲೆ ಇಟ್ಟುಕೊಂಡು ಸಮರ್ಥಿಸುತ್ತಿರುವ ಬೇಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸಂಪುಟದಿಂದ ವಜಾಮಾಡಬೇಕು ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಕ್ಷೇತ್ರವನ್ನು ಕಲುಷಿತಗೊಳಿಸಿರುವ ಪಠ್ಯಪುಸ್ತಕ ಪರಿಷ್ಕರಣೆಯ ಅದ್ವಾನಕ್ಕೆ ಕಾರಣಕರ್ತರಾಗಿರುವ ಸಚಿವರನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ, ಒಂದು ವೇಳೆ ಸಮರ್ಥನೆಗೆ ಮುಂದಾದರೆ ಮುಖ್ಯಮಂತ್ರಿಯವರೆ ರಾಜೀನಾಮೆ ನೀಡಬೇಕಿದೆ ಎಂದು ಎಚ್ಚರಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಯಂತಹ ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಸ್ವಭಾವತ: ವಿಕೃತನಾದ ಒಬ್ಬ ಯಕಶ್ಚಿತ್ ಟ್ರೋಲರ್‍ಗೆ ಒಪ್ಪಿಸಿ, ಅವನು ಮಾಡುವ ಅವಾಂತರಗಳಿಗೆ ಅವನೇ ಹೊಣೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿ ಈಗ ಆತ ಮಾಡಿಟ್ಟಿರುವ ರಾಡಿಗಳನ್ನೆಲ್ಲ ಸಮರ್ಥಿಸುತ್ತಾ ಕೂತಿರುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಅವಸರದಲ್ಲಿ ಮೌಖಿಕ ಸೂಚನೆ ನೀಡಿ ಘಟನೋತ್ತರ ಅನುಮತಿ ನೀಡಲು ಇದೇನು ಶೇ.40 ಕಮಿಷನ್ ಬಾಚುವ ರಸ್ತೆ ಕಾಮಗಾರಿಯೇ? ಇಂತಹ ಮೌಖಿಕ ಸೂಚನೆಯಲ್ಲಿ ಕೆಲಸಮಾಡಿಸಿ ಅಮಾಯಕ ಗುತ್ತಿಗೆದಾರನನ್ನು ಬಲಿ ಪಡೆದಿರುವ ಈ ಸರ್ಕಾರ ಈಗ ಎಳೆಯ ಮಕ್ಕಳ ಭವಿಷ್ಯವನ್ನೇ ಬಲಿಕೊಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಪಠ್ಯಪುಸ್ತಕ ಸಮಿತಿಯ ವಿಕೃತ ಅಧ್ಯಕ್ಷ ಮತ್ತು ಅವನ ಗ್ಯಾಂಗ್, ಜ್ಞಾನದೀವಿಗೆಗಳಾದ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾ ಪುಲೆ, ನಾರಾಯಣ ಗುರು, ಕೆಂಪೇಗೌಡ, ಕುವೆಂಪು ಮಾತ್ರವಲ್ಲ ಮಹರ್ಷಿ ವಾಲ್ಮೀಕಿಯವರನ್ನೂ ಬಿಡದೆ ಅವಮಾನಿಸಿದೆ. ಇಂತಹ ಜ್ಞಾನವಿರೋಧಿ ಮತ್ತು ಮನುಷ್ಯವಿರೋಧಿ ಪಠ್ಯವನ್ನು ತರಗತಿಗಳಲ್ಲಿ ಬೋಧನೆಗೆ ಅವಕಾಶ ನೀಡಿದರೆ ಅದು ನಾಡಿಗೆ ಬಗೆವ ದ್ರೋಹವಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಉಳಿದಿರುವುದೊಂದೇ ದಾರಿ.

ಮೊದಲು ಶಿಕ್ಷಣ ಸಚಿವರನ್ನು ವಜಾಮಾಡಿ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷನನ್ನು ಬಂಧಿಸಿ ಸರ್ಕಾರಕ್ಕೆ ಆತನಿಂದ ಆಗಿರುವ ನಷ್ಟವನ್ನು ಆತನಿಂದಲೇ ವಸೂಲಿ ಮಾಡಿ, ಈ ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿಯ ಶಿಫಾರಸಿನ ಹಳೆಯ ಪಠ್ಯವನ್ನೇ ಈ ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಿ ಎಂದು ಒತ್ತಾಯಿಸಿದ್ದಾರೆ.ಇಷ್ಟೆಲ್ಲ ತಪರಾಕಿಗಳ ನಂತರವೂ ಮುಖ್ಯಮಂತ್ರಿಗಳು ಸಂಘ ಪರಿವಾರ ಒಡ್ಡಿರುವ ನೇಣಿಗೆ ಕೊರಳೊಡ್ಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ.

ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧದ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿದೆ. ನಮ್ಮ ಕಾರ್ಯಕರ್ತರು ಈ ಹೋರಾಟವನ್ನು ಜಿಲ್ಲೆ, ತಾಲೂಕು, ಹೋಬಳಿ ಮಟ್ಟಕ್ಕೂ ಕೊಂಡೊಯ್ಯಲಿದ್ದಾರೆ.

ಆಗ ಮುಖ್ಯಮಂತ್ರಿಗಳ ತಲೆದಂಡ ಅವರ ಪಕ್ಷಕ್ಕೂ ಅನಿವಾರ್ಯವಾಗಬಹುದು ಎಂದು ಸೂಕ್ಷ್ಮ ಎಚ್ಚರಿಕೆ ನೀಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button