ಪಂಚಮಸಾಲಿ ಬೇಡಿಕೆಗೆ ಸ್ಪಂದನೆ

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ೨ಬಿ ಯಿಂದ ೨ಎಗೆ ಸೇರಿಸಬೇಕು ಎಂಬ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಪಡೆದಿದ್ದು, ಈ ವರದಿಯ ಬಗ್ಗೆ ಕಾನೂನು ತಜ್ಞರೊಂದಿಗೂ ಚರ್ಚೆ ನಡೆಸಿದ್ದು, ಸಚಿವ ಸಂಪುಟ ಸಭೆಯ ನಂತರ ಪಂಚಮಸಾಲಿ ಸಮುದಾಯಕ್ಕೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ.
ಪಂಚಮಸಾಲಿ ಸಮುದಾಯದ ಬೇಡಿಕೆಗೆ ಸರ್ಕಾರ ಅಸ್ತು ಎನ್ನಲಿದೆ ಎಂಬ ಮಾಹಿತಿಗಳು ಸರ್ಕಾರದ ಉನ್ನತ ಮೂಲಗಳಿಂದ ಸಿಕ್ಕಿವೆ.ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಲಿಜ ಸಮುದಾಯವನ್ನು ಶೈಕ್ಷಣಿಕವಾಗಿ ೨ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಿದ್ದರು.
ಅದೇ ಮಾದರಿಯಲ್ಲಿ ಈಗ ಲಿಂಗಾಯತ-ಪಂಚಮಸಾಲಿ ಸಮುದಾಯವನ್ನು ೨ಎಗೆ ಸೇರ್ಪಡೆ ಮಾಡುವ ತೀರ್ಮಾನವನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲಾಗಿದ್ದು, ಇದಕ್ಕೆ ಸಂಪುಟದ ಅನುಮೋದನೆಯನ್ನು ಇಂದು ಮುಖ್ಯಮಂತ್ರಿಗಳು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಪಂಚಮಸಾಲಿ ಸಮುದಾಯದವರು ಕೂಡಲ ಸಂಗಮದ ಜಯಬಸವಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ತಮ್ಮ ಬೇಡಿಕೆ ಈಡೇರಿಕೆಗೆ ಇಂದಿನ ವರೆಗೂ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಇಂದು ಮಧ್ಯಾಹ್ನ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ, ಅದರಂತೆ ಎರಡು ದಿನದ ಹಿಂದೆ ಸವದತ್ತಿಯಿಂದ ಸಮುದಾಯದ ಜನರ ಪಾದಯಾತ್ರೆ ಆರಂಭವಾಗಿದ್ದು, ಇಂದು ಸುವರ್ಣಸೌಧದತ್ತ ಈ ಪಾದಯಾತ್ರೆ ಸಾಗಿದೆ.ಈ ಪಾದಯಾತ್ರೆ ಸುವರ್ಣಸೌಧಕ್ಕೆ ಬರುವಷ್ಟರಲ್ಲಿ ಸರ್ಕಾರ ತನ್ನ ತೀರ್ಮಾನ ಪ್ರಕಟಿಸಲಿದೆ ಎಂದು ಹೇಳಲಾಗಿದೆ.
ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಕೆ ಸಂಬಂಧ ಬೆಳಗಾವಿಯ ಸುವರ್ಣಸೌಧದಲ್ಲಿಂದು ಮಧ್ಯಾಹ್ನ ೨ ಗಂಟೆಗೆ ಸಚಿವ ಸಂಪುಟದ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಪಂಚಮಸಾಲಿ ಸಮುದಾಯದ ಬೇಡಿಕೆಗಳ ಬಗ್ಗೆ ಚರ್ಚೆಗಳಾಗಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಕಾನೂನಾತ್ಮಕ ಚರ್ಚೆಯ ನಂತರ ತೀರ್ಮಾನ: ಸಿಎಂಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ಆದಷ್ಟು ಬೇಗ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಎಲ್ಲ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಧಿವೇಶನದ ಕಲಾಪಕ್ಕೂ ಮುನ್ನ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರು ತಮ್ಮನ್ನು ಭೇಟಿಯಾಗಿ ಮಧ್ಯಂತರ ವರದಿ ನೀಡಿದ್ದಾರೆ. ಈ ವರದಿಯನ್ನು ಪರಿಶೀಲಿಸಿ ಕಾನೂನು ಮತ್ತು ಸಂಸದೀಯ ಸಚಿವರೊಂದಿಗೆ ಚರ್ಚಿಸಿ, ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಈ ಹಿಂದೆ ನಾಗಮೋಹನ್‌ದಾಸ್ ವರದಿ ಬಂದು ಒಂದು ವರ್ಷದ ನಂತರ ವಿವರ ನೀಡಲಾಗಿತ್ತು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಬಂದು ೧೦ ವರ್ಷವಾಗಿದ್ದು, ಸರ್ಕಾರದ ಒಪ್ಪಿಗೆ ಪಡೆಯಲಾಗಿಲ್ಲವಾದ್ದರಿಂದ ಇನ್ನು ವಿವರ ನೀಡಿಲ್ಲ. ಕಾಂತರಾಜು ಆಯೋಗದ ವರದಿ ಆಯೋಗದಲ್ಲೇ ಇದೆ. ಸರ್ಕಾರದ ಮಟ್ಟಕ್ಕೆ ಬಂದಿಲ್ಲ.
ಹಾಗಾಗಿ ಇದರ ಬಗ್ಗೆ ವಿವರ ನೀಡಲಾಗಿಲ್ಲ. ಆದರೆ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಕೆಯ ಸುಳಿವು ನೀಡಿದರು.
ಸಚಿವ ಅಶೋಕ್ ಹೇಳಿಕೆಸುವರ್ಣವಿಧಾನಸೌಧದಲ್ಲಿಂದು ಲಿಂಗಾಯತ ಪಂಚಮಸಾಲಿ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಪಂಚಸಾಲಿ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳು ಸುದೀರ್ಘ ಚರ್ಚೆ ಮಾಡಿದ್ದಾರೆ.
ಕಾನೂನು ಇಲಾಖೆಯಿಂದಲೂ ಮಾಹಿತಿ ಪಡೆದಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ನ್ಯಾಯವನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ ಎಂದು ಹೇಳುವ ಮೂಲಕ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಕೆಯ ಸುಳಿವು ನೀಡಿದರು.