ನ.೧೪ ರಿಂದ ಜೆಡಿಎಸ್ ಪಂಚರತ್ನ ಯಾತ್ರೆ

ಮಳೆಯಿಂದ ಮುಂದೂಡಲಾದ ಜೆಡಿಎಸ್ನ ’ಪಂಚರತ್ನ ರಥಯಾತ್ರೆ’ ನ. ೧೪ ರಿಂದ ಆರಂಭವಾಗಲಿದೆ. ನ. ೧ ರಂದು ಕೋಲಾರದ ಮುಳಬಾಗಿಲುನಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಾಗಿತ್ತಾದರೂ ಮಳೆಯಿಂದ ಮುಂದೂಡಲಾಗಿತ್ತು.
ಈಗ ನ. ೧೪ ರಿಂದ ಯಾತ್ರೆ ಪುನಾರಂಭವಾಗಲಿದೆ. ಈಗಾಗಲೇ ನಿಗದಿಪಡಿಸಿರುವಂತೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಈ ರಥಯಾತ್ರೆ ಆರಂಭವಾಗಲಿದ್ದು, ಡಿ. ೬ರವರೆಗೂ ನಡೆಯಲಿದೆ. ಈ ರಥಯಾತ್ರೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.
ಹಾಗೆಯೇ, ಸಂಭವನೀಯ ಅಭ್ಯರ್ಥಿಗಳಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದ ಮೇಲೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣವಚನವನ್ನೂ ಮಾಡಿಸಲಾಗುತ್ತದೆ.ಈ ರಥಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯವನ್ನೂ ನಡೆಸಲಿದ್ದಾರೆ.
ಈ ಯಾತ್ರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದ್ದು, ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಂತರ ೨ನೇ ಹಂತದ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.