ಅಪರಾಧರಾಜಕೀಯರಾಷ್ಟ್ರಿಯ

ನ್ಯಾಷನಲ್ ಹೆರಾಲ್ಡ್‌ ಕೇಸ್ : ರಾಹುಲ್, ಸೋನಿಯಾಗೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ..!

ಹೊಸ ದಿಲ್ಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
2011-12ರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇ ಡಿ ಈ ಕ್ರಮ ಕೈಗೊಂಡಿದೆ.

ಜಾರಿ ನಿರ್ದೇಶನಾಲಯ (enforcement directorate) ರಾಹುಲ್ ಗಾಂಧಿ ಅವರಿಗೆ ಜೂನ್ 2 ರಂದು ಹಾಜರಾಗುವಂತೆ ಸೂಚಿಸಿತ್ತು. ಇನ್ನು ಸೋನಿಯಾ ಗಾಂಧಿ ಅವರಿಗೆ ಜೂನ್ 8 ರಂದು ಹಾಜರಾಗುವಂತೆ ತಿಳಿಸಿತ್ತು. ಆದ್ರೆ, ರಾಹುಲ್ ಗಾಂಧಿ ಅವರು ಇಡಿ ಎದುರು ಹಾಜರಾಗಲು ಸಮಯ ಕೇಳಿದ್ದಾರೆ. ತಾವು ವಿದೇಶದಲ್ಲಿ ಇರುವ ಕಾರಣ ಹೆಚ್ಚಿನ ಕಾಲಾವಕಾಶ ಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರ ಪ್ರಕಾರ, ಜೂನ್ 8 ರ ಒಳಗೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಇದೇ ವಿಚಾರದ ಕುರಿತಾಗಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುವ ಮೂಲಕ ಬಿಜೆಪಿ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. ಬಿಜೆಪಿ ಹಾಗೂ ಅವರ ಮೂಲ ಸಂಘಟನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.

1942ರಲ್ಲಿ ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯನ್ನು ಆರಂಭಿಸಲಾಯ್ತು. ಆ ಸಮಯದಲ್ಲಿ ಬ್ರಿಟಿಷರು ಪತ್ರಿಕೆ ವಿರುದ್ಧ ದಮನಕಾರಿ ನೀತಿ ಅನುಸರಿಸಿದ್ದರು. ಇಂದು ಮೋದಿ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಅದೇ ಕೆಲಸ ಮಾಡುತ್ತಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಮಾಡಲಾಗಿದೆ. ಆದ್ರೆ, ಈ ಪ್ರಕರಣದಲ್ಲಿ ಯಾವುದೇ ರೀತಿಯ ಹಣ ವರ್ಗಾವಣೆ ಆಗಿಲ್ಲ. ಇದನ್ನು ನೋಡಿದರೆ ಮೇಲ್ನೋಟಕ್ಕೆ ಇದೊಂದು ಪ್ರತೀಕಾರದ ರಾಜಕಾರಣ ಅನ್ನೋದು ಸಾಬೀತಾಗ್ತಿದೆ ಎಂದು ಸುರ್ಜೇವಾಲಾ ಕಿಡಿ ಕಾರಿದ್ದಾರೆ. ಬಿಜೆಪಿ ಕೀಳು ರಾಜಕೀಯ ಮಾಡುತ್ತಿದೆ. ಬಿಜೆಪಿಗೆ ಕಾಂಗ್ರೆಸ್‌ ಬಗ್ಗೆ ಭಯ ಇದೆ ಎಂದು ಸುರ್ಜೇವಾಲಾ ಚಾಟಿ ಬೀಸಿದ್ದಾರೆ.

ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್..?
1938ರಲ್ಲಿ ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯನ್ನು ಜವಹರಲಾಲ್ ನೆಹರೂ ಅವರು ಆರಂಭಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದ್ದ ಈ ಪತ್ರಿಕೆ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಣಿ ಆಯಿತು. ಅಸೋಸಿಯೇಟ್ ಜರ್ನಲ್ಸ್‌ ಲಿಮಿಟೆಡ್ ಎಂಬ ಸಂಸ್ಥೆಯು ಈ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಇಂಗ್ಲೀಷ್ ಮಾತ್ರವಲ್ಲ, ಹಿಂದಿ ಹಾಗೂ ಉರ್ದು ಭಾಷೆಯಲ್ಲೂ ಈ ಪತ್ರಿಕೆ ಪ್ರಕಟ ಆಗುತ್ತಿತ್ತು. 2008ರಲ್ಲಿ ಪತ್ರಿಕೆ ಪ್ರಕಟಣೆ ನಿಂತು ಹೋದಾಗ 90 ಕೋಟಿ ರೂ. ಸಾಲ ಇತ್ತು.
ಅಸೋಸಿಯೇಟ್ ಜರ್ನಲ್ಸ್‌ ಲಿಮಿಟೆಡ್ ಎಂಬ ಸಾರ್ವಜನಿಕ ಸಂಸ್ಥೆ (ಸ್ವಾತಂತ್ರ್ಯ ಹೋರಾಟಗಾರರು ಷೇರು ಹೊಂದಿದ್ದ ಸಂಸ್ಥೆ)ಯನ್ನು ಯಂಗ್ ಇಂಡಿಯಾ ಲಿಮಿಟೆಡ್ ಎಂಬ ರಾಹುಲ್ ಗಾಂಧಿ ನಿರ್ದೇಶಕರಾಗಿರುವ ಖಾಸಗಿ ಸಂಸ್ಥೆ ಖರೀದಿ ಮಾಡಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕಂಪನಿ ವರ್ಗಾವಣೆ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂದು ಅವರು ಆರೋಪಿಸಿದ್ದರು.
ಈ ನಡುವೆ, ಅಸೋಸಿಯೇಟ್ ಜರ್ನಲ್ಸ್‌ ಲಿಮಿಟೆಡ್ ಷೇರುದಾರರಾದ ಹಲವರು ತಮ್ಮ ಷೇರುಗಳ ವರ್ಗಾವಣೆ ಕುರಿತಾಗಿ ಯಾವುದೇ ನೋಟಿಸ್ ಸಿಕ್ಕಿಲ್ಲ ಎಂದು ಹೇಳಿದ್ದರು. ಈ ರೀತಿ ಹೇಳಿದವರಲ್ಲಿ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್, ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರೂ ಸೇರಿದ್ದಾರೆ. ಈ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ಅಸೋಸಿಯೇಟ್ ಜರ್ನಲ್ಸ್‌ ಲಿಮಿಟೆಡ್ ಷೇರು ಅವರ ತಂದೆಯಿಂದ ಬಂದಿತ್ತು. ಆದ್ರೆ, ಈ ಬಗ್ಗೆ ಅವರಿಗೆ ಮಾಹಿತಿ ನೀಡದೆಯೇ 2010ರಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ದೂರಿದ್ದರು.

ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು ಈ ವ್ಯವಹಾರದಲ್ಲಿ ಸುಮಾರು 2000 ಕೋಟಿ ರೂ. ಮೊತ್ತದ ಹಣ ಹಾಗೂ ಆಸ್ತಿ ವರ್ಗಾವಣೆ ನಡೆದಿದೆ ಎಂದು ಆರೋಪಿಸಿದ್ದರು. 90 ಕೋಟಿಗೂ ಹೆಚ್ಚು ಮೊತ್ತದ ಸಾಲಕ್ಕೆ ಪ್ರತಿಯಾಗಿ ಕೇವಲ 50 ಲಕ್ಷ ರೂ. ನೀಡಿ ಕಂಪನಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಆರೋಪಿಸಿದ್ದರು. ಕಾಂಗ್ರೆಸ್ ಪಕ್ಷದ ನಿಧಿಯನ್ನೇ ಸಾಲದ ರೂಪದಲ್ಲಿ ಅಸೋಸಿಯೇಟ್ ಜರ್ನಲ್ಸ್‌ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿತ್ತು ಎಂದೂ ಆಪಾದಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button