ನೋಟು ಅಮಾನ್ಯೀಕರಣ: ಕೇಂದ್ರ ಮತ್ತು ಆರ್‌ಬಿಐನಿಂದ ದಾಖಲೆ ಕೇಳಿದ ಕೋರ್ಟ್

ಹೊಸದಿಲ್ಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ 1000 ರೂ. ಮತ್ತು ರೂ. 500 ರೂ. ಮುಖಬೆಲೆಯ ನೋಟು ಅಮಾನ್ಯೀಕರಣ ನಿರ್ಧಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರ ಮತ್ತು ಆರ್‌ಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಕೇಂದ್ರ ಸರಕಾರ 2016ರಲ್ಲಿ ಕೈಗೊಂಡಿದ್ದ ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ತೀರ್ಪು ಕಾಯ್ದಿರಿಸಿರುವ ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ, ಹಿರಿಯ ವಕೀಲರಾದ ಪಿ. ಚಿದಂಬರಂ, ಶ್ಯಾಮ್ ದಿವಾನ್, ಅಟಾರ್ನಿ ಜನರಲ್ ಆರ್.
ವೆಂಕಟರಮಣಿ ಸೇರಿದಂತೆ ಸರಕಾರ, ಆರ್‌ಬಿಐ, ಅರ್ಜಿದಾರರ ಪರ ವಕೀಲರ ವಾದಗಳನ್ನು ಆಲಿಸಿತು. ಕೇಂದ್ರವು ತರಾತುರಿಯಲ್ಲಿ ತೆಗೆದುಕೊಂಡ ಅಪ್ರಸ್ತುತ ನಿರ್ಧಾರ ಇದಾಗಿರಲಿಲ್ಲ. ಆರ್ಥಿಕ ನೀತಿಯ ಒಂದು ಭಾಗವಾಗಿ ಕೈಗೊಳ್ಳಲಾಗಿತ್ತು ಎಂದು ಆರ್‌ಬಿಐ ಸಮರ್ಥಿಸಿಕೊಂಡಿದೆ.ವಕೀಲರ ವಾದ ಆಲಿಸಿದ ಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಅಲ್ಲದೇ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರ ಹಾಗೂ ಆರ್‌ಬಿಐಗೆ ನಿರ್ದೇಶಿಸಿದೆ. ಮೊಹರಾದ ಲಕೋಟೆಯಲ್ಲಿ ದಾಖಲೆಗಳನ್ನು ಸಲ್ಲಿಸುವುದಾಗಿ ಅಟಾರ್ನಿ ಜನರಲ್ ವೆಂಕಟರಮಣಿ ಅವರು ಕೋರ್ಟ್‌ಗೆ ಮಾಹಿತಿ ನೀಡಿದರು.
2016ರ ನವೆಂಬರ್ 8ರಂದು ಕೇಂದ್ರ ಸರಕಾರ ಘೋಷಿಸಿದ ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ 58 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ವಿಚಾರಣೆ ನಡೆಸುತ್ತಿದೆ.
ಚಲಾವಣೆಯಲ್ಲಿದ್ದ ಶೇ 86ಕ್ಕೂ ಅಧಿಕ ನೋಟುಗಳನ್ನು ಏಕಾಏಕಿ ಹಿಂದಕ್ಕೆ ಪಡೆಯುವ ಬೃಹತ್ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಆರ್‌ಬಿಐ ಕಾಯ್ದೆ ಅಡಿಯಲ್ಲಿನ ಅಗತ್ಯ ಪ್ರಕ್ರಿಯೆಗಳನ್ನು ಸರ್ಕಾರ ಪಾಲಿಸಿದೆಯೇ ಎಂಬುದನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.ನಿಮ್ಮ ಬಳಿ (ಕೇಂದ್ರ ಸರಕಾರ) ದಾಖಲೆಗಳಿದ್ದರೆ, ಅದನ್ನು ಕೋರ್ಟ್‌ನ ಪರಿಶೀಲನೆಗೆ ತನ್ನಿ.
ನಿಮ್ಮ ಬಳಿ ಅವು ಸಿದ್ಧವಾಗಿದ್ದರೆ, ಈಗಲೇ ಕೊಡಿ. ಇಲ್ಲವಾದರೆ ಬಳಿಕ ನೀಡಬಹುದು” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯ್, ಎಎಸ್ ಬೋಪಣ್ಣ, ವಿ ರಾಮಸುಬ್ರಮಣ್ಯಂ ಮತ್ತು ಬಿವಿ ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠ ಸೂಚನೆ ನೀಡಿದೆ.