ರಾಜ್ಯ

ನೋಟಿಸ್‌ಗೆ ಕ್ಯಾರೇ ಅನ್ನದ ಓಲಾ, ಉಬರ್‌, ರಾಪಿಡೋ; ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್‌

ಕರ್ನಾಟಕ ಸಾರಿಗೆ ಇಲಾಖೆ ಸೋಮವಾರ ಓಲಾ, ಉಬರ್ ಮತ್ತು ರಾಪಿಡೋಗೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ನಗರದಲ್ಲಿ ಆ್ಯಪ್‌ ಮೂಲಕ ನೀಡುತ್ತಿರುವ ಆಟೋ ಸೇವೆಗೆ ಹೆಚ್ಚಿನ ದರ ಪಡೆಯುತ್ತಿರುವ ಸಂಬಂಧ ಬೆಂಗಳೂರಿನಲ್ಲಿರುವ ತನ್ನ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು ಹೇಳಿದೆ.ಇಲಾಖೆಯು ಓಲಾ, ಉಬರ್‌ ಕಂಪನಿಗಳಿಗೆ ಒಂದೇ ಸಮಯ ನಿಗದಿಪಡಿಸಿದ್ದರೆ, ರಾಪಿಡೋಗೆ ಇನ್ನೊಂದು ಸಮಯವನ್ನು ನಿಗದಿಪಡಿಸಿದೆ.

ರಾಪಿಡೋ ನಗರದಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದ್ದು, ತಮ್ಮ ಪರವಾನಗಿ ಸ್ಥಿತಿಯ ಬಗ್ಗೆ ಮಾಹಿತಿ ಸಲ್ಲಿಕೆ ಮಾಡಲು ಕಂಪನಿಗಳಿಗೆ ಸೂಚಿಸಿದೆ.ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್ ಹೇಮಂತ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಈ ಬೆಳವಣಿಗೆಗಳನ್ನು ಖಚಿತಪಡಿಸಿದ್ದಾರೆ.

ಸರ್ಕಾರದೊಳಗಿನ ಕಾನೂನು ಸಲಗೆಹಾರರ ಸಲಹೆಯನ್ನು ಪಡೆದ ಬಳಿಕ ಸಾರಿಗೆ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಆದೇಶವನ್ನು ರವಾನಿಸುವ ಮೊದಲು ಕಂಪನಿಗಳೊಂದಿಗೆ ವೈಯಕ್ತಿಕ ವಿಚಾರಣೆಯನ್ನು ನಡೆಸಲು ಸಾರಿಗೆ ಇಲಾಖೆ ಮುಂದಾಗಿದೆ.

ಕರ್ನಾಟಕ ಆನ್-ಡಿಮಾಂಡ್ ಟ್ರಾನ್ಸ್‌ಪೊರ್ಟೇಷನ್‌ ಟೆಕ್ನಾಲಜಿ ಅಗ್ರೆಗೇಟರ್‌ ರೂಲ್ಸ್‌ 2016’ ಅಡಿಯಲ್ಲಿ ಕಂಪನಿಗಳಿಗೆ ನೀಡಲಾಗಿರುವ ಪರವಾನಗಿಯಡಿ ಆಟೋ ಸೇವೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕಳೆದ ವಾರ ಓಲಾ, ಉಬರ್ ಮತ್ತು ರಾಪಿಡೋಗೆ ಸಾರಿಗೆ ಇಲಾಖೆ ಆದೇಶಿಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿದೆ.

ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಸಾರಿಗೆ ಇಲಾಖೆ ನೀಡಿರುವ ಗಡುವು ಮಂಗಳವಾರಕ್ಕೆ ಮುಕ್ತಾಯವಾಗಲಿದೆ. ಆದರೆ ಈವರೆಗೆ ಮೂರು ಕಂಪನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ್ಯಪ್‌ ಮೂಲಕ ಆಟೋ ಸೇವೆ ನೀಡುವ ಮೂರೂ ಕಂಪನಿಗಳು ಸರ್ಕಾರ ನಿಗದಿಪಡಿಸಿದ ದರವನ್ನು ಉಲ್ಲಂಘಿಸಿ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ದರಗಳನ್ನು ವಸೂಲಿ ಮಾಡುತ್ತಿವೆ ಎಂಬ ಆರೋಪವನ್ನು ಎದುರಿಸುತ್ತಿವೆ.

ಈ ಬಗ್ಗೆ ಎಕನಾಮಿಕ್ ಟೈಮ್ಸ್‌ ಕಳುಹಿಸಿದ ಪ್ರಶ್ನೆಗಳಿಗೆ ಓಲಾ, ಉಬರ್‌ ಮತ್ತು ರಾಪಿಡೋ ಪ್ರತಿಕ್ರಿಯೆ ನೀಡಿಲ್ಲ.ಇದೇ ವೇಳೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಬೆಂಗಳೂರಿನಲ್ಲಿ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಆ್ಯಪ್‌ ಮೂಲಕ ಆಟೋ ಸೇವೆ ನೀಡುವ ಅಗ್ರಿಗೇಟರ್‌ಗಳ ಕಾರ್ಯಾಚರಣೆಯನ್ನು ನಿಯಂತ್ರಿಸುವ ಮಾರ್ಗಗಳ ಕುರಿತು ಚರ್ಚಿಸಲಿದ್ದಾರೆ.

ಪ್ರಯಾಣ ದರ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಅವರು ‘ಇಟಿ’ಗೆ ತಿಳಿಸಿದ್ದಾರೆ.ಓಲಾ, ಉಬರ್‌ ಆಟೋ ಜಪ್ತಿಈ ಹಿಂದೆ ಸಾರಿಗೆ ಸಚಿವ ಬಿ ಶ್ರೀರಾಮುಲು, ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಸಾರಿಗೆ ಇಲಾಖೆ ನೀಡಿರುವ ನಿರ್ದೇಶನದ ಹೊರತಾಗಿಯೂ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಓಡುತ್ತಿರುವ ಆಟೋಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಿದ್ದಾರೆ ಎಂದಿದ್ದರು.

ಅದರಂತೆ ಸೋಮವಾರ ಆಟೋಗಳು ಆರ್‌ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದು, ದಂಡವನ್ನೂ ವಿಧಿಸಿದ್ದಾರೆ. ನಿಯಮ ಉಲ್ಲಂಘಿಸಿ ಸೇವೆ ಒದಗಿಸುತ್ತಿರುವ ಆ್ಯಪ್‌ ಆಧಾರಿತ ಓಲಾ, ಉಬರ್‌ ಆಟೋಗಳನ್ನು ಆರ್‌ಟಿಒ ಅಧಿಕಾರಿಗಳು ಜಪ್ತಿ ಮಾಡಲಾರಂಭಿಸಿದ ಬೆನ್ನಿಗೆ ಚಾಲಕರು ಆಟೋಗಳ ಸಹಿತ ಜಯನಗರ 4ನೇ ಬ್ಲಾಕ್‌ನಲ್ಲಿರುವ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಟ್ಯಾಕ್ಸಿ ಕಂಪೆನಿಗಳಿಗೆ ಉತ್ತರ ನೀಡಲು ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ ಆರ್‌ಟಿಒ ಅಧಿಕಾರಿಗಳು, ಗ್ರಾಹಕರ ಸೋಗಿನಲ್ಲಿ ಓಲಾ, ಉಬರ್‌ ಆ್ಯಪ್‌ ಮೂಲಕ ಆಟೋ ಬುಕ್‌ ಮಾಡಿ ಸ್ಥಳಕ್ಕೆ ಬಂದ ಆಟೋಗಳನ್ನು ಜಪ್ತಿ ಮಾಡಿ, ದುಬಾರಿ ದಂಡದ ರಸೀದಿ ನೀಡಿದರು.

ಇದರಿಂದ ಆಟೋ ಚಾಲಕರು ಹೌಹಾರಿದರು.ಇದನ್ನು ಖಂಡಿಸಿ, ಜಯನಗರ ಆರ್‌ಟಿಒ ಕಚೇರಿ ಮುಂಭಾಗ ಆಟೋ ಚಾಲಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ‘‘ನಮಗೆ ಪ್ರಯಾಣಿಕರಿಂದ ಸಿಗುವುದೇ 30 ರೂ. ಅಧಿಕ ಹಣ ಪಡೆಯುತ್ತಿರುವ ಓಲಾ, ಉಬರ್‌ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳದೆ, ಬಡ ಚಾಲಕರ ಆಟೋಗಳನ್ನು ಜಪ್ತಿ ಮಾಡಿ ದಂಡ ವಿಧಿಸುತ್ತಿರುವುದು ಸರಿಯಲ್ಲ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿಆಟೋ ಪ್ರಯಾಣ ದರವು ಮೊದಲ 2 ಕಿ.ಮೀ. ಗೆ 30 ರೂ. ನಿಗದಿಪಡಿಸಲಾಗಿದೆ.

ಆನಂತರದ ಪ್ರತಿ ಕಿ.ಮೀ.ಗೆ 15 ರೂ. ಇದೆ. ಆದರೆ, ಓಲಾ, ಉಬರ್‌, ರಾಪಿಡೋ ಕಂಪೆನಿಗಳು ಕನಿಷ್ಠ 100 ರೂ. ವಸೂಲು ಮಾಡುತ್ತಿದ್ದವು. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು.ಇದೀಗ ಸರಕಾರ ನೋಟಿಸ್‌ ನೀಡಿದ ಬಳಿಕ ಕಂಪನಿಗಳು ನಾಲ್ಕು ಕಿ.ಮೀ.ಗೆ ಕನಿಷ್ಠ ದರವನ್ನು 60 ರೂ.

ಗೆ ಮತ್ತು ಎರಡು ಕಿ.ಮೀ.ಗೆ 30 ರೂ.ಗೆ ಇಳಿಕೆ ಮಾಡಿವೆ. ಆದರೆ ಇದರ ಮೇಲೆ ಕಂಪನಿಗಳು ತಮ್ಮ ಶುಲ್ಕವನ್ನು ವಿಧಿಸುತ್ತಿದ್ದು ಗ್ರಾಹಕರು ಕ್ರಮವಾಗಿ 47 ರೂ. ಮತ್ತು 79 ರೂ. ಪಾವತಿಸುತ್ತಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button