ರಾಜ್ಯ

ನೂತನ ಪಿಂಚಣಿ ವ್ಯವಸ್ಥೆ ಸದನದಲ್ಲಿ ಚರ್ಚಿಸಿ ತೀರ್ಮಾನ

ಸರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆಯ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆ ನಡೆಸಿ ನಂತರ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಗೆ ವಿಧಾನಸಭೆ ಒಪ್ಪಿದ್ದು, ನೂತನ ಪಿಂಚಣಿ ವ್ಯವಸ್ಥೆ ಬಗ್ಗೆ ಸದನದಲ್ಲಿ ನಾಳೆ ಇಲ್ಲವೇ ನಾಡಿದ್ದು ಚರ್ಚೆಯಾಗಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಲಿದೆ.

ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಲಿಂಗೇಶ್ ಅವರು ವಿಷಯ ಪ್ರಸ್ತಾಪಿಸಿ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ತೆಗೆದು ಹಾಕುವಂತೆ ನೌಕರರು ಹೋರಾಟ ನಡೆಸುತ್ತಿದ್ದಾರೆ. ಇದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪಕ್ಷಭೇದ ಮರೆತು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ದನಿಗೂಡಿಸಿದರು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎನ್‌ಪಿಎಸ್ ವಿಚಾರವನ್ನು ಪ್ರಸ್ತಾಪಿಸಲು ಸದನದಲ್ಲಿ ಎಲ್ಲ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ ಎಂದು ಹಾಸ್ಯದ ದಾಟಿಯಲ್ಲಿ ಹೇಳಿ, ಎನ್‌ಪಿಎಸ್ ಗಂಭೀರ ವಿಚಾರವಾಗಿದೆ.

ಇಡೀ ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ. ಸದನದ ಒಪ್ಪಿಗೆ ಪಡೆದೇ ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಬೇಕು ಎಂಬುದನ್ನು ತೀರ್ಮಾನಿಸಿದ್ದೇವೆ. ಸರ್ಕಾರಿ ನೌಕರರಿಗೆ ಹತ್ತು ಹಲವು ಸವಲತ್ತುಗಳನ್ನು ನೀಡಲಾಗಿದೆ. ಟಿಎ, ಡಿಎಗಳನ್ನು ಸಕಾಲಿಕವಾಗಿ ನೀಡುತ್ತಿದ್ದೇವೆ.

ಕೇಂದ್ರ ಸರ್ಕಾರ ಡಿಎ ಪ್ರಕಟಿಸಿದ ೨೪ ಗಂಟೆಗಳಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಡಿಎ ಸಿಗುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಹಾಗೆಯೇ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗವನ್ನು ರಚನೆ ಮಾಡಿದ್ದೇವೆ ಎಂದರು.ಈ ಕುರಿತು ಸಾಧಕ-ಬಾಧಕಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ. ಸರ್ಕಾರ ಏಕಪಕ್ಷೀಯ ತೀರ್ಮಾನ ಮಾಡುವುದು ಬೇಡ ಎಂಬುದು ನನ್ನ ನಿಲುವು.

ಬೊಕ್ಕಸವನ್ನು ನಿಭಾಯಿಸಲು ಅಭಿವೃದ್ಧಿ ಕಾರ್ಯಗಳ ವಿಚಾರ, ನೌಕರರ ಹಿತಾಸಕ್ತಿ ಎಲ್ಲದರ ಬಗ್ಗೆಯೂ ಚರ್ಚೆಗಳಾಗಲಿ. ಸರ್ಕಾರ ಸುದೀರ್ಘ ಉತ್ತರ ನೀಡುತ್ತದೆ ಎಂದು ಹೇಳಿದರು.ಆಗ ಸಭಾಧ್ಯಕ್ಷರು ಈ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡುವುದಾಗಿ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button