ಅಪರಾಧಬೆಂಗಳೂರುರಾಜ್ಯ

ನಿವೃತ್ತ ಶಿಕ್ಷಕಿಯ ಕೈ ಕಾಲು ಕಟ್ಟಿ ಹಾಕಿ ಹತ್ಯೆ; 3 ತಿಂಗಳಲ್ಲಿ ರಾಜಧಾನಿಯಲ್ಲಿ ಮೂವರು ಒಂಟಿ ವೃದ್ಧೆಯರ ಕೊಲೆ

ಬೆಂಗಳೂರು: ಒಂಟಿ ವೃದ್ಧೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ. ನಿವೃತ್ತ ಶಿಕ್ಷಕಿ ಪ್ರಸನ್ನಕುಮಾರಿ (68) ಕೊಲೆಯಾದವರು.

ಆಂಧ್ರದ ವಿಜಯವಾಡ ಮೂಲದ ಪ್ರಸನ್ನಕುಮಾರಿ ವಿದ್ಯಾರಣ್ಯಪುರದ ಅಂಬಾಭವಾನಿ ಲೇಔಟ್‌ನ ವಸಂತ ಕೋಕಿಲ ಅವರ ಮನೆಯ ಎರಡನೇ ಮಹಡಿಯ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಗುರುವಾರ ರಾತ್ರಿ ಎಂಟು ಗಂಟೆಯಾದರೂ ಮನೆಯಲ್ಲಿ ಲೈಟ್‌ ಹಾಕಿರಲಿಲ್ಲ.

ಹೀಗಾಗಿ, ವಸಂತ ಅವರು ಮನೆಯ ಬಳಿ ತೆರಳಿ ನೋಡಿದಾಗ ಪ್ರಸನ್ನಕುಮಾರಿ ಅವರ ಕೈ ಕಾಲು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಹತ್ಯೆ ಮಾಡಿರುವುದು ಕಂಡು ಬಂದಿದೆ. ಈ ಭೀಕರ ಘಟನೆ ಕಂಡ ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ವಿದ್ಯಾರಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಸನ್ನಕುಮಾರಿ ಹತ್ಯೆ ಸಂಬಂಧ ವಸಂತ ಕೋಕಿಲ ಅವರು ನೀಡಿರುವ ದೂರು ಆಧರಿಸಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸನ್ನಕುಮಾರಿ ಕೊಲೆ ಕುರಿತು ವಿಜಯವಾಡದಲ್ಲಿರುವ ಅವರ ಸಹೋದರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಪ್ರಸನ್ನಕುಮಾರಿ ಅವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಆಸ್ತಿ ವೈಷಮ್ಯಕ್ಕೆ ಕೊಲೆ ಶಂಕೆ?ಪ್ರಸನ್ನಕುಮಾರಿ ಮೈಸೂರು ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. 2014ರಲ್ಲಿ ಅವರ ಪತಿ ತೀರಿಕೊಂಡಿದ್ದರು.

ಚಿಂತಾಮಣಿ ತಾಲೂಕಿನ ಏಣಿಗದಲೆ ಗ್ರಾಮದಲ್ಲಿರುವ ಜವಾಹರಲಾಲ್‌ ನವೋದಯ ವಿದ್ಯಾಲಯದಲ್ಲಿ ಪ್ರಸನ್ನಕುಮಾರಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದು, ಎಂಟು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು.

ಬಳಿಕ ಮೈಸೂರಿನಲ್ಲಿ ಸ್ವಲ್ಪ ಕಾಲ ವಾಸವಿದ್ದರು. ಇದೇ ವರ್ಷ ಜನವರಿಯಲ್ಲಿ ಪರಿಚಯಸ್ಥೆ ವಸಂತ ಕೋಕಿಲ ಅವರ ವಿದ್ಯಾರಣ್ಯಪುರದ ಮನೆಯಲ್ಲಿ ಬಾಡಿಗೆಗೆ ಬಂದು ವಾಸವಿದ್ದರು.

ಪತಿಯ ಸಂಬಂಧಿಕರು ಹಾಗೂ ಪ್ರಸನ್ನಕುಮಾರಿ ಮಧ್ಯೆ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಜಗಳವಿತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ, ಇದೇ ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆಯಿದೆ.

ಜತೆಗೆ ಬೇರೆ ಯಾವ ಕಾರಣಕ್ಕೆ ಹತ್ಯೆ ನಡೆದಿರಬಹುದು ಎಂಬುದರ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಒಂಟಿ ವೃದ್ಧೆಯರ ಟಾರ್ಗೆಟ್‌ ಪ್ರಸನ್ನಕುಮಾರಿ ಅವರ ಹತ್ಯೆ ಸೇರಿ ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜಧಾನಿಯಲ್ಲಿ ಮೂವರು ಒಂಟಿ ವೃದ್ಧೆಯರ ಹತ್ಯೆಯಾಗಿದೆ.

ಸಿ.ಕೆ. ಅಚ್ಚುಕಟ್ಟು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯಶೋದಮ್ಮ (75) ಎಂಬುವವರನ್ನು ಪರಿಚಯಸ್ಥ ಬಾಡಿಗೆದಾರನೇ ಜುಲೈನಲ್ಲಿ ಕೊಲೆಗೈದಿದ್ದ.

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನೇಪಾಳಿ ಸೆಕ್ಯೂರಿಟಿ ಗ್ಯಾಂಗ್‌ ಜಯಶ್ರೀ (83) ಎಂಬುವವರನ್ನು ಕೊಲೆಗೈದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿತ್ತು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button