ರಾಜ್ಯ

ನಿಲ್ಲದ ಮಳೆ ತಪ್ಪದ ರಗಳೆ

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಹಲವೆಡೆ ವರುಣ ಮತ್ತೆ ಅಬ್ಬರಿಸಿದ್ದಾನೆ. ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಬೆಳೆಗಳು ನೀರು ಪಾಲಾಗಿದ್ದು, ಸೇತುವೆಗಳು ಮುಳುಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಇಂದು ಮುಂಜಾನೆವರೆಗೂ ಮಳೆ ಸುರಿದಿದ್ದು, ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದ್ದಾರೆ. ರಾಜ್ಯದಲ್ಲಿ ಇನ್ನೂ ೫ ದಿನ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ರಾಜ್ಯದ ಮಂತ್ರಿಗಳ ನಿವಾಸದ ಮುಂಭಾಗ ನೀರು ಜಲಾವೃತಗೊಂಡಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಳಿಯ ಅಂಡರ್‌ಪಾಸ್‌ನಲ್ಲಿ ೨ ಅಡಿ ನೀರು ನಿಂತಿದ್ದು, ಸಚಿವರಾದ ಸಿ.ಸಿ ಪಾಟೀಲ್, ಮುರುಗೇಶ್ ನಿರಾಣಿ ಸೇರಿದಂತೆ ೭ ಮಂತ್ರಿಗಳ ಸರ್ಕಾರಿ ನಿವಾಸದ ಗೇಟ್ ಮುಂಭಾಗ ಕೆರೆಯಂತಾಗಿದೆ.

ನೀರು ಹರಿಯಲು ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ.ಬೆಂಗಳೂರು ನಗರದ ಡೈರಿ ಸರ್ಕಲ್ ಮೇಲ್ಸೇತುವೆ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಟ್ಯಾಂಕರ್ ಪಲ್ಟಿಯಾಗಿದೆ. ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಆದರೆ ಅಕ್ಕಪಕ್ಕ ವಾಹನಗಳು ಸಂಚರಿಸುತ್ತಿರಲಿಲ್ಲ.

ಹೀಗಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಧಾರಾಕಾರ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿವೆ.

ದಕ್ಷಿಣ ಒಳನಾಡು ಸೇರಿದಂತೆ ೫ ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹುಬ್ಬಳ್ಳಿಯಲ್ಲೂ ಮಳೆ ಸುರಿದಿದ್ದು, ಹೆಬಸೂರು ಗ್ರಾಮದಲ್ಲಿ ನಿಗರಿ ಹಾಗೂ ಬೆಣ್ಣೆ ಹಳ್ಳ ಉಕ್ಕಿ ಹರಿದಿದ್ದು, ರಾತ್ರೋ ರಾತ್ರಿ ಮನೆಗಳಿಗೆ ನೀರು ನುಗ್ಗಿದ್ದು,ನಿವಾಸಿಗಳು ಪರದಾಡುವಂತಾಯಿತು.

ಮನೆಯಲ್ಲಿದ್ದ ದಿನಸಿ, ಬಟ್ಟೆಗಳು, ಮಕ್ಕಳ ಪುಸ್ತಕಗಳು ನೀರಿನಲ್ಲಿ ತೇಲಾಡುತ್ತಿವೆ.ಮತ್ತೊಂದೆಡೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಎಡೂರ ಸೇತುವೆ ಹಾಗೂ ಮಲ್ಲಿಕಾವಾಢ=ದತ್ತವಾಢ ಸೇತುವೆಗಳು ಧಾರಾಕಾರ ಮಳೆಗೆ ನೀರು ನುಗ್ಗಿದ್ದು, ರೈತರು ತಮ್ಮ ಜಮೀನಿಗೆ ತೆರಳಲು ಪರದಾಡುವಂತಾಗಿದೆ.ವಿಜಯಪುರ ಜಿಲ್ಲೆಯ ಡೋಣಿ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದ್ದು, ಉಜಿನಿ ಜಲಾಶಯದಿಂದ ಭೀಮಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರಿಂದ ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಚಾಮರಾಜನಗರದ ಸೋಮಣ್ಣ ಬಡಾವಣೆಯಲ್ಲಿ ಸುರಿದ ಮಳೆಯಿಂದಾಗಿ ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.

ಮನೆಯಲ್ಲಿದ್ದ ಪಾತ್ರೆ ಪಗಡೆಗಳು ನೀರು ಪಾಲಾಗಿವೆ. ಈ ಮಳೆ ಅವಾಂತರಕ್ಕೆ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇನ್ನು ರಾಮನಗರ ಜಿಲ್ಲೆಯಾದ್ಯಂತ ಧಾರಾಕಾರ ಮಳೆಗೆ ಕೆರೆಗಳು ಕೋಡಿ ಬಿದ್ದ ಪರಿಣಾಮ ಜಮೀನುಗಳು ಜಲಾವೃತಗೊಂಡಿವೆ.

ಕಣ್ವಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ವರ್ಷಧಾರೆಯಿಂದಾಗಿ ಸಾವನದುರ್ಗ, ಹೇರೋಹಳ್ಳಿ, ಶ್ಯಾನುಭೋಗನಹಳ್ಳಿ ನದಿಪಾತ್ರದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ.ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಭಾರಿ ಮಳೆಯಿಂದಾಗಿ ಕೆರೆ-ಕಟ್ಟೆಗಳು ಭರ್ತಿಯಾಗಿವೆ.

ಹಾದಲವೇಣಿ ಗ್ರಾಮದ ಬಳಿ ಹರಿಯುವ ನದಿ ವೀಕ್ಷಿಸಲು ಬಂದಿದ್ದ ಕೃಷ್ಣಪ್ಪ ಎಂಬುವರು ಆಯಾತಪ್ಪಿ ನೀರಿಗೆ ಬಿದ್ದರು. ಅರ್ಧ ಕಿ.ಮೀವರೆಗೂ ಕೊಚ್ಚಿಕೊಂಡು ಹೋಗಿದ್ದ ಕೃಷ್ಣಪ್ಪ, ಜಾಲಿಗಿಡ ಹಿಡಿದು ಜೀವ ಉಳಿಸಿಕೊಂಡರು.

ಒಟ್ಟಾರೆ ರಾಜ್ಯದಲ್ಲಿ ವರುಣ ಬಿಟ್ಟೂ ಬಿಡದೆ ಕಾಡುತ್ತಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.ಬಾಗಲಕೋಟೆ ಜಿಲ್ಲೆಯ ಬಿಳಗಿ ಪಟ್ಟಣದಲ್ಲಿ ಧಾರಾಕಾರ ಮಳೆಯಿಂದಾಗಿ ೧೦ ಮನೆಗಳಿಗೆ ಹಾನಿ ಉಂಟಾಗಿದೆ. ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಮಂಡ್ಯ ಜಿಲ್ಲೆಯಲ್ಲಿಯೂ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ.

ಪಾಂಡವಪುರ ತಾಲ್ಲೂಕಿನ ಲಿಂಗಪುರ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಗೃಹಪಯೋಗಿ ವಸ್ತುಗಳು ನೀರು ಪಾಲಾಗಿವೆ. ಗ್ರಾಮಸ್ಥರು ಉಪಹಾರಕ್ಕೂ ಪರಿತಪ್ಪಿಸುವಂತಾಗಿದೆ. ದಾವಣಗೆರೆಯಲ್ಲಿ ವರುಣನ ಆರ್ಭಟಕ್ಕೆ ಅಣಜಿ ಕೆರೆಯಲ್ಲಿ ನೀರು ಹೆಚ್ಚಾಗಿದ್ದರಿಂದ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಕೆಲವು ಗ್ರಾಮಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

ನಿರಂತರ ಮಳೆಯಿಂದಾಗಿ ೭೫ ವರ್ಷಗಳ ಬಳಿಕ ದಾವಣಗೆರೆ ತಾಲ್ಲೂಕಿನ ಹಾಲೂರು ಗ್ರಾಮದ ಪುರಾತನ ಬಾವಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಾವಿಗೆ ಬಾಗಿನ ಸಮರ್ಪಿಸಿ ಸಂಭ್ರವಮಿಸಿದ್ದಾರೆ.

ತುಮಕೂರು ಜಿಲ್ಲೆಂiiಲ್ಲಿಯೂ ವರುಣನ ಅಬ್ಬರ ಮುಂದುವರಿದಿದ್ದು, ಕೊರmಗೆರೆ, ತುಮಕೂರು, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಪಾವಗಡ, ಸಿರಾ ಸೇರಿದಂತೆ ಹಲವೆಡೆ ವರ್ಷಾಧಾರೆಯಿಂದಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಅಡಕೆ ತೋಟಕ್ಕೆ ನೀರು ನುಗ್ಗಿ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ.

ಗುಬ್ಬಿ ತಾಲ್ಲೂಕು ನಿಟ್ಟೂರು ರಸ್ತೆಯಲ್ಲಿನ ಹೆಸರಳ್ಳಿ ಬಳಿ ಮಳೆ ನೀರಿನಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.ಸಿರಾ ಕಡೆಯಿಂದ ಮೈಸೂರು ಕಡೆಗೆ ಹೋಗುವವರು ಬೇರೆ ಮಾರ್ಗದಲ್ಲಿ ಚಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button