ನಿರ್ದೇಶಕ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್: ಸಿನಿಮಾ ಯೋಜನೆಯನ್ನೇ ಕೈಬಿಟ್ಟ ಪುಷ್ಪರಾಜ್!

ಚೆನ್ನೈ: ರಾಜ-ರಾಣಿ ಸಿನಿಮಾ ಮೂಲಕ ಮೊದಲ ಚಿತ್ರದಲ್ಲಿ ಬ್ಲಾಕ್ಬಸ್ಟರ್ ಗೆಲುವು ದಾಖಲಿಸಿದ ನಿರ್ದೇಶಕ ಅಟ್ಲೀ ಕುಮಾರ್ ಕಾಲಿವುಡ್ನ ಬಹು ಬೇಡಿಕೆ ನಿರ್ದೇಶಕರಲ್ಲಿ ಒಬ್ಬರು. ಮೆರ್ಸಲ್, ಥೇರಿ ಮತ್ತು ಬಿಗಿಲ್ ಸಾಲು ಸಾಲು ಹಿಟ್ ಚಿತ್ರಗಳನ್ನೇ ನೀಡುತ್ತಾ ಬಂದಿದ್ದಾರೆ.
ಅಟ್ಲೀ ಅವರು ನಿರ್ದೇಶನದ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.ಅವರ ಪ್ರತಿಭೆಯನ್ನು ನೋಡಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ತಮಗೊಂದು ಚಿತ್ರ ಮಾಡಿಕೊಡುವಂತೆ ಆಫರ್ ಮಾಡಿದ್ದು, ಅದರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೀಗಾಗಿ ಅಟ್ಲೀ ಅವರಿಗೆ ಭಾರೀ ಬೇಡಿಕೆ ಇದೆ. ಸಿನಿಮಾ ಮಾಡುವುದರ ಕುರಿತು ಇತ್ತೀಚೆಗಷ್ಟೇ ಅಟ್ಲಿ ಅವರ ಜತೆ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮಾತುಕತೆ ನಡೆಸಿದ್ದಾರೆ.
ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ಅಟ್ಲೀ ಅವರ ಭಾರೀ ಸಂಭಾವನೆ ಅಲ್ಲು ಅರ್ಜುನ್ ಅವರನ್ನು ಬೆರಗಾಗಿಸಿದೆ. ಅಟ್ಲೀ ಅವರು ನಿರ್ದೇಶನ ಮಾಡಲು ಬರೋಬ್ಬರಿ 35 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟರಂತೆ. ಇದನ್ನು ಕೇಳಿ ಸುಸ್ತಾಗಿರುವ ಅಲ್ಲು ಅರ್ಜುನ್ ಸಿನಿಮಾವನ್ನೇ ರದ್ದು ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ಕಾಲಿವುಡ್ ಹಾಗೂ ಟಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಸುದ್ದಿಯಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಅಲ್ಲು ಅರ್ಜುನ್ ಅವರು ಅಟ್ಲೀ ಅವರೊಂದಿಗೆ ಪ್ಯಾನ್-ಇಂಡಿಯಾ ಸಿನಿಮಾ ಮಾಡಲು ಯೋಜಿಸುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿದೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ ಎಂದು ಹೇಳಲಾಗಿತ್ತು. ಇನ್ನು ಪುಷ್ಪ ಮೊದಲ ಭಾಗದ ಯಶಸ್ಸಿನ ನಂತರ ಅಲ್ಲು ಅರ್ಜುನ್ ಅವರ ಸಂಭಾವನೆ ಗಮನಾರ್ಹ ಏರಿಕೆ ಕಂಡಿದೆ. ವರದಿಗಳ ಪ್ರಕಾರ, ಲೈಕಾ ಪ್ರೊಡಕ್ಷನ್ ಹೌಸ್ ಅಲ್ಲು ಅರ್ಜುನ್‌ಗೆ 100 ಕೋಟಿ ರೂ. ಸಂಭಾವನೆ ಕೊಡಲು ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಸಿನಿಮಾ ನಡೆಯುತ್ತಾ? ಇಲ್ಲವಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಇದೇ ಸಂದರ್ಭದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಅಟ್ಲೀ ನಿರ್ದೇಶನದ ಮುಂದಿನ ಚಿತ್ರದ ಅಪ್ಡೇಟ್ಗಾಗಿ ಅಭಿಮಾನಿಗಳು ಅಸಹನೆಯಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರಕ್ಕೆ ತಾತ್ಕಾಲಿಕವಾಗಿ ಲಯನ್ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಎಸ್‌ಆರ್‌ಕೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದರಿಂದ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ. ನಯನತಾರಾ ತನಿಖಾಧಿಕಾರಿಯಾಗಿ ನಟಿಸಲಿದ್ದಾರೆ. ಈ ಚಿತ್ರದ ಮೂಲಕ ನಯನತಾರಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.