
ಬೆಂಗಳೂರು: ಸೆಕ್ಯೂರಿಟಿ ಕೆಲಸ ಹಾಗೂ ಗೂರ್ಖಾ ಕೆಲಸ ಅಂದರೆ ನಮಗೆ ಥಟ್ ಅಂತಾ ನೆನಪಾಗೋದು ನೇಪಾಳಿಗಳು. ಒಂದು ಕಾಲದಲ್ಲಿ ಮನೆ, ಏರಿಯಾ ಕಾಯೋದು ಅಂದ್ರೆ ನಮಗೆಲ್ಲ ನಂಬಿಕಸ್ಥರು ನೇಪಾಳಿಗಳು. ಗೂರ್ಖಾ ಕೆಲಸದಲ್ಲಿ ಅವರು ಅಷ್ಟು ನಿಯತ್ತು ಉಳಿಸಿಕೊಂಡಿದ್ರು.
ಸದ್ಯ ಅಂದಿನ ನಂಬಿಕೆಯನ್ನು ಬಂಡವಾಳ ಮಾಡಿಕೊಂಡಿರುವ ನೇಪಾಳಿಗಳು ಉಂಡಮನೆಗೆ ಕನ್ನಹಾಕುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಇವರ ಟಾರ್ಗೆಟ್ ಅಂದ್ರೆ ರಾಜಕಾರಣಿಗಳು, ಉದ್ಯಮಿಗಳು ಮತ್ತು ಆಗರ್ಭ ಶ್ರೀಮಂತರು.
ಸಿಲಿಕಾನ್ ಸಿಟಿಯ ಸಿರಿವಂತರು ತಮ್ಮ ಸಂಪತ್ತಿನ ಗುಟ್ಟು ರಟ್ಟಾಗಬಾರದು ಎಂದು ನೇಪಾಳಿಗಳನ್ನ ಸೆಕ್ಯೂರಿಟಿ ಗಾರ್ಡ್ ಮತ್ತು ಅವರ ಪತ್ನಿಯನ್ನ ಮನೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.
ನೇಪಾಳಿಗರು ಸಹ ನೀಡುವ ಅಲ್ಪ ಸಂಬಳಕ್ಕೆ ಫುಲ್ ಆಕ್ಟೀವ್ ಆಗಿ ಕೆಲಸ ಮಾಡುತ್ತಾರೆ. ಇದರಿಂದ ಮನೆಯವರ ನಂಬಿಕೆ ಗಳಿಸುತ್ತಾರೆ.
ಮೂರ್ನಾಲ್ಕು ತಿಂಗಳ ನಂತರ ಅಸಲಿ ಆಟ ಶುರು ಮಾಡುವ ಇವರು ಮತ್ತೆ ಮಾಲೀಕರಿಗೆ ಯಾಮಾರಿಸಿ ಎಸ್ಕೇಪ್ ಆಗುತ್ತಾರೆ. ಅದು ಬರಿಗೈಯಲ್ಲಿ ಅಲ್ಲಾ ಮನೆಯಲ್ಲಿರುವ ನಗನಾಣ್ಯ, ಚಿನ್ನಾಭರಣ ದೋಚಿ.
ಹೀಗೆ ನಗರದ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನೇಪಾಳಿಗಳು ಕೈಚಳಕ ತೋರಿ ಬರೋಬ್ಬರಿ 75 ಲಕ್ಷ ಬೆಲೆಬಾಳುವ ಚಿನ್ನ, ವಜ್ರ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಕಳೆದ 6 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ನೇಪಾಳಿ ದಂಪತಿ, ಮಾಲೀಕರು ಸಿಂಗಾಪುರಕ್ಕೆ ಹೋಗಿದ್ದಾಗ ಮನೆಯನ್ನೇ ದೋಚಿದ್ದಾರೆ.
ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಸಮೇತ ಇವರು ಎಸ್ಕೇಪ್ ಆಗಿದ್ದಾರೆ. ಲಲಿತ್ ಬಹದ್ದೂರ್ ಹಾಗೂ ಲೀಲಾ ಬಹದ್ದೂರ್ ದಂಪತಿಯಿಂದ ಕಳೆದ ತಿಂಗಳ 28ರಂದು ಇಂತಹ ಕೃತ್ಯ ನಡೆದಿದೆ.
ಇನ್ನು ಬೆಂಗಳೂರಿನಲ್ಲಿ ಪದೇ ಪದೇ ನೇಪಾಳ ಮೂಲದವರು ಮನೆಗೆಲಸ, ಸೆಕ್ಯುರಿಟಿ ಕೆಲಸಕ್ಕೆಂದು ಬಂದು ಐದಾರು ಮನೆಗಳಲ್ಲಿ ಕೋಟಿ ಕೋಟಿ ದೋಚಿ ಪರಾರಿಯಾಗಿದ್ದಾರೆ.
ಆದರೆ ಬಹುತೇಕ ಕೇಸ್ ಗಳಲ್ಲಿ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಪತ್ತೆಯಾದರು ಸಹ ಕಳುವಾಗಿದ್ದ ಚಿನ್ನಾಭರಣ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸದ್ಯ ಹನುಮಂತನಗರ ಠಾಣಾ ವ್ಯಾಪ್ತಿಯ ವರುಣ್ ಎಂಬುವವರ ಮನೆಯಲ್ಲಿ ನೇಪಾಳಿ ದಂಪತಿ ಕೈಚಳಕ ತೋರಿದ್ದು, ಆರೋಪಿಗಳಿಗಾಗಿ ಹನುಮಂತ ನಗರ ಪೊಲೀಸರು ಬಲೆ ಬೀಸಿದ್ದಾರೆ. ಹೀಗಾಗಿ ಜನ ನೇಪಾಳಿಗಳಿಗೆ ಕೆಲಸ ಕೊಡುವ ಮುನ್ನ ಸ್ವಲ್ಪ ಚಿಂತಿಸಬೇಕಾಗಿದೆ.