ನಾಳೆ ರ‍್ಯಾಪಿಡ್ ರಸ್ತೆ ಲೋಕಾರ್ಪಣೆ, ಪ್ರಾಯೋಗಿಕ ಸಂಚಾರಕ್ಕೆ ಅವಕಾಶ

ನೂತನ ತಂತ್ರಜ್ಞಾನ ಬಳಸಿ ಉದ್ಯಾನನಗರಿಯಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಿಸಲಾಗಿರುವ ರ‍್ಯಾಪಿಡ್ ರಸ್ತೆಯನ್ನು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ಬಿಬಿಎಂಪಿ ವತಿಯಿಂದ ನಗರದ ಹಳೆಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ 500 ಮೀಟರ್ ಉದ್ದದ ರ‍್ಯಾಪಿಡ್ ರಸ್ತೆಯನ್ನು ನಿರ್ಮಿಸಲಾಗಿದ್ದು, ಪ್ರಾಯೋಗಿಕವಾಗಿ ನಾಳೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
ನಗರದ ರಸ್ತೆಗಳಲ್ಲಿ ವೈಟ್‍ಟಾಪಿಂಗ್ ಅಥವಾ ಟೆಂಡರ್‍ಶೂರ್ ಕಾಮಗಾರಿ ನಡೆಸುವ ಸಮಯದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ದಟ್ಟಣೆ ಹೆಚ್ಚಾಗಿದ್ದು, ಇದನ್ನು ತಪ್ಪಿಸುವ ಸಲುವಾಗಿ ಪಾಲಿಕೆಯು ರ್ಯಾಪಿಡ್ ರಸ್ತೆ ಎಂಬ ವಿನೂತನ ತಂತ್ರಜ್ಞಾನವನ್ನು ಅನುಷ್ಟಾನಗೊಳಿಸುತ್ತಿದೆ.
ಈ ರಸ್ತೆಯನ್ನು ಕ್ಯೂರಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ. ಫ್ರೀಕಾಸ್ಟ್ ಪ್ಯಾನೇಲ್ ಅಳವಡಿಸಿದ ಕೂಡಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬಹುದು.
ಏನಿದರ ವಿಶೇಷ:ರ್ಯಾಪಿಡ್ ರಸ್ತೆಯನ್ನು ಫ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‍ಮೆಂಟ್(ಫ್ರೀಕಾಸ್ಟ್ ಪ್ಯಾನಲ್)ನಿಂದ ನಿರ್ಮಿಸಲಾಗುತ್ತಿದೆ. ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್‍ಗಳನ್ನು ಅಳವಡಿಸಲಾಗುತ್ತದೆ.
ಪ್ರತಿ ಫ್ರೀಕಾಸ್ಟ್ ಪ್ಯಾನಲ್ ಗಳಲ್ಲಿ 4 ರಂಧ್ರಗಳಿರಲಿದ್ದು, ವಾಹನಗಳು ಇದರ ಮೇಲೆ ಸಂಚರಿಸುವಾಗ ವಾಹನಗಳ ಭಾರದಿಂದ ಪ್ಯಾನಲ್ ಗಳು ಅಲುಗಾಡದಂತೆ ಒಂದು ಪ್ಯಾನಲ್‍ನಿಂದ ಮತ್ತೊಂದು ಪ್ಯಾನಲ್ ಗೆ ಪೋಸ್ಟ್ ಟೆನ್ಷನಿಂಗ್ ಮಾಡಲಾಗುತ್ತದೆ.
ಇದರಿಂದ ಎಷ್ಟೇ ಭಾರದ ವಾಹನಗಳು ಸಂಚರಿಸಿದರು ಯಾವುದೇ ಸಮಸ್ಯೆಯಾಗುವುದಿಲ್ಲ.ಒಂದು ಫ್ರೀಕಾಸ್ಟ್ ಪ್ಯಾನಲ್ 5 ಅಡಿ ಅಗಲ, 20 ಅಡಿ ಉದ್ದ ಹಾಗೂ 7 ಇಂಚು ದಪ್ಪವಿರುತ್ತದೆ.
ಪ್ರತಿ 45 ಮೀಟರ್ ಗೂ ರ್ಯಾರ್ಪಿಡ್ ಹಾರ್ಡನಿಂಗ್ ಕಾಂಕ್ರೀಟ್ ಹಾಕಲಾಗುತ್ತದೆ. ಫ್ರೀಕಾಸ್ಟ್ ಪ್ಯಾನಲ್‍ಗಳನ್ನು ಬೇರೆಡೆ ತಯಾರಿಸಿ ಕ್ಯೂರಿಂಗ್ ಮಾಡಿಕೊಂಡು ತರಲಾಗುತ್ತದೆ. ರಸ್ತೆಗಳ ವಿನ್ಯಾಸಕ್ಕೆ ತಂಕ್ಕಂತೆ ಪ್ಯಾನಲ್ ಗಳನ್ನು ಸಿದ್ದಪಡಿಸಲಾಗುತ್ತದೆ.
ದೇಶದಲ್ಲೇ ಇದೇ ಮೊದಲು:ಬಿಬಿಎಂಪಿಯು ಆದಿತ್ಯ ಬಿರ್ಲಾ ಅಲ್ಟ್ರಾ ಟೆಕ್ ಸಂಸ್ಥೆಯ ಸಹಯೋಗದೊಂದಿಗೆ ರ್ಯಾಪಿಡ್ ರಸ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಸದರಿ ರಸ್ತೆಯು ದೀರ್ಘಕಾಲ ಬಾಳಿಕೆ ಬರಲಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ರ್ಯಾಪಿಡ್ ರಸ್ತೆಯೆಂಬ ವಿನೂತನ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗಿದೆ.