
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ನಾಳೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ. ನಾಳೆ ಸಂಜೆ 7 ಗಂಟೆಗೆ ನಗರದ ಖಾಸಗಿ ಹೋಟೆಲ್‍ನಲ್ಲಿ ಶಾಸಕಾಂಗ ಸಭೆಯನ್ನು ಕರೆಯಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ.
ಜೂ.10ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರನಟ ಜಗ್ಗೇಶ್ ಗೆಲುವು ಖಚಿತವಾಗಿದ್ದು, ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಡುವುದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.
ವಿಧಾನಸಭೆಯ ಸ್ಪೀಕರ್, ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಸೇರಿದಂತೆ ಒಟ್ಟು 122 ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ನಿರಾಯಾಸವಾಗಿ ಗೆಲ್ಲಲಿದ್ದಾರೆ. ಆದರೆ 3ನೇ ಅಭ್ಯರ್ಥಿಯಾಗಿರುವ ಲೆಹರ್ ಸಿಂಗ್ ಅವರನ್ನೇ ಗೆಲ್ಲಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಠಕ್ಕರ್ ಕೊಡುವುದು ಕಮಲ ನಾಯಕರ ಪ್ರಮುಖ ಗುರಿಯಾಗಿದೆ.
ಶಾಸಕಾಂಗ ಸಭೆಯಲ್ಲಿ ಮೊದಲ ಅಭ್ಯರ್ಥಿಯಾಗಿರುವ ನಿರ್ಮಲಾ ಸೀತಾರಾಮನ್‍ಗೆ ಎಷ್ಟು ಮತ ಚಲಾಯಿಸಬೇಕು, ಇವರಿಗೆ ಯಾವೆಲ್ಲ ಶಾಸಕರು ಮತ ಹಾಕಬೇಕು ಎಂಬುದನ್ನು ಪ್ರಮುಖರು ತೀರ್ಮಾನಿಸಲಿದ್ದಾರೆ. 2ನೇ ಅಭ್ಯರ್ಥಿ ಜಗ್ಗೇಶ್‍ಗೆ ಎಷ್ಟು ಮತ, ಯಾವ ಶಾಸಕರು, ಇದೇ ರೀತಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೂ ಯಾರ್ಯಾರು ಮತ ಹಾಕಬೇಕೆಂಬುದು ತೀರ್ಮಾನವಾಗಲಿದೆ.
ಮೂಲಗಳ ಪ್ರಕಾರ ಮೊದಲನೇ ಹಾಗೂ 2ನೇ ಅಭ್ಯರ್ಥಿಗೆ ಬಿಜೆಪಿ 45 ಮತಗಳನ್ನು ನಿಗದಿಪಡಿಸುವ ಸಾಧ್ಯತೆ ಇದೆ. 46 ಮತಗಳನ್ನು ಎರಡು ಅಭ್ಯರ್ಥಿಗಳಿಗೆ ನಿಗದಿಪಡಿಸಿದರೆ 3ನೇ ಅಭ್ಯರ್ಥಿಗೆ ಕೇವಲ 30 ಮತಗಳು ಉಳಿಯಲಿವೆ. ಆಗ ಲೆಹರ್‍ಸಿಂಗ್ ಗೆಲುವಿಗೆ ತೊಡಕಾಗುವ ಸಂಭವವಿದೆ.ಹೀಗಾಗಿ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್‍ಗೆ ತಲಾ 45 ಮತಗಳು, ಉಳಿಕೆಯಾಗುವ 32 ಮತಗಳು ಲೆಹರ್‍ಸಿಂಗ್ ನಿಗದಿಪಡಿಸಲಿದೆ. ಇದೇ ವೇಳೆ ನಾಳಿನ ಶಾಸಕಾಂಗ ಸಭೆಯಲ್ಲಿ ಚುನಾವಣಾ ಏಜೆಂಟರನ್ನು ಬಿಜೆಪಿ ನೇಮಕ ಮಾಡಲಿದೆ. ಜೂ.10ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಮತದಾನ ನಡೆಯಲಿದ್ದು, ಬೆಳಗ್ಗೆ ಖಾಸಗಿ ಹೋಟೆಲ್‍ನಲ್ಲಿ ಉಪಾಹಾರ ಸೇವಿಸಿ ಖಾಸಗಿ ವಾಹನದಲ್ಲಿ ವಿಧಾನಸೌಧಕ್ಕೆ ಬರುವಂತೆ ಎಲ್ಲ ಶಾಸಕರಿಗೂ ಪಕ್ಷ ಸೂಚನೆ ಕೊಡಲಿದೆ.