
ನವದೆಹಲಿ: ನಾಯಿ ಬೊಗಳಿದ್ದಕ್ಕೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಶ್ವಾನ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಇಡೀ ಘಟನೆಯು ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಗಿದ್ದೇನು..?ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿ ನಾಯಿ ಬೊಗಳಿದ ಕಾರಣಕ್ಕೆ ವ್ಯಕ್ತಿಯೊಬ್ಬ ಶ್ವಾನ ಸೇರಿ ತನ್ನ ನೆರೆಯ ಕುಟುಂಬದ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಧರಮ್‍ವೀರ್ ದಹಿಯಾ ಎಂಬಾತನೇ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ.
ಮನೆಯ ಮುಂದೆ ಹಾದುಹೋಗುತ್ತಿದ್ದಾಗ ಗೇಟ್‌ನಲ್ಲಿ ಕುಳಿತಿದ್ದ ನಾಯಿ ಆತನನ್ನು ನೋಡಿ ಬೊಗಳಿದೆ. ಇದರಿಂದ ಕೋಪಗೊಂಡ ಧರಮ್‍ವೀರ್ ಶ್ವಾನದ ಬಾಲ ಹಿಡಿದು ಅದಕ್ಕೆ ಹೊಡೆಯಲು ಶುರುಮಾಡಿದ್ದಾನೆ. ಈ ವೇಳೆ ಮಾಲೀಕರು ಮನೆಯಿಂದ ಹೊರಬಂದು ತಮ್ಮ ಶ್ವಾನವನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಧರಮ್‍ವೀರ್ ಅವರ ಮೇಲೆ ಇಟ್ಟಿಗೆ ಎಸೆದಿದ್ದಾನೆ. ಬಳಿಕ ನಾಯಿ ಜೋರಾಗಿ ಬೊಗಳಲು ಶುರುಮಾಡಿದೆ. ಇದರಿಂದ ಮತ್ತಷ್ಟು ಕುಪಿತನಾದ ಆತ ಓಡಿ ಹೋಗಿ ಕಬ್ಬಿಣದ ರಾಡ್ ತಂದು ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಯಾವಾಗ ಧರಮ್‍ವೀರ್ ಕಬ್ಬಿಣದ ರಾಡ್ ತಂದನೋ ಮನೆಯವರು ತಮ್ಮ ಶ್ವಾನವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಕಬ್ಬಿಣದ ರಾಡ್ ಸಮೇತ ಓಡಿಬಂದ ಧರಮ್‍ವೀರ್‍ಗೆ ನಾಯಿ ಕಚ್ಚಲು ಮುಂದಾಗಿದೆ. ಈ ವೇಳೆ ಆತ ನಾಯಿಗೆ ಬಲವಾಗಿ ಹೊಡೆದಿದ್ದಾನೆ. ರಾಡ್‍ನ ಹೊಡೆತದ ರಭಸಕ್ಕೆ ನಾಯಿ ಜೋರಾಗಿ ಚೀರಾಡುತ್ತಾ ನೆಲಕ್ಕೆ ಬಿದ್ದು ಒದ್ದಾಡಿದೆ. ಈ ವೇಳೆ ಬಿಡಿಸಿಕೊಳ್ಳಲು ಬಂದ ಶ್ವಾನದ ಮಾಲೀಕರ ಮೇಲೆಯೂ ರಾಡ್‍ನಿಂದ ಧರಮ್‍ವೀರ್ ಹಲ್ಲೆ ನಡೆಸಿದ್ದಾನೆ. ಅವರು ಸಹ ನೆಲಕ್ಕೆ ಬಿದ್ದು ಒದ್ದಾಡಿದ್ದಾರೆ.
ಬಳಿಕ ಆತ ಮತ್ತೆ ಶ್ವಾನದ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಮನೆ ಮಾಲೀಕರ ಪುತ್ರ ರಕ್ಷಿತ್ ಧರಮ್‍ವೀರ್‍ಗೆ ಮೇಲೆ ಏರಿಹೋಗಿ ತಡೆದಿದ್ದಾರೆ. ರಕ್ಷಿತ್ ಹೇಳಿಕೆಯ ಆಧಾರದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಐಪಿಸಿ ಸೆಕ್ಷನ್ 589, 22, 308, 323, 341 ಮತ್ತು 451 ಅಡಿಯಲ್ಲಿ ಧರಮ್‍ವೀರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂಕಪ್ರಾಣಿಯ ಮೇಲೆ ಹಲ್ಲೆ ನಡೆಸಿದ ಪಾಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟಿಜನ್‍ಗಳು ಆಗ್ರಹಿಸಿದ್ದಾರೆ.