
ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಸಾವನ್ನಪ್ಪಿದ್ದು , ಆಕೆಯ ಪತಿ ಮೇಲೆಯೇ ಕೊಲೆ ಶಂಕೆ ವ್ಯಕ್ತವಾಗಿದೆ.ಮೂಲತಃ ಬಾಗೇಪಲ್ಲಿಯ ಅನುಷಾ(20) ಮೃತಪಟ್ಟ ನವವಿವಾಹಿತೆ. ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಕಾಲೇಜಿನಲ್ಲಿ ಅನುಷಾ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೋಗಿ ಬರುತ್ತಿದ್ದ ವೇಳೆ ಬಂಡೆ ಕೆಲಸದ ಸೂಪರ್ ವೈಸರ್ ಅಭಿಲಾಶ್(25)ನ ಪರಿಚಯವಾಗಿದೆ.
ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ಇವರಿಬ್ಬರೂ ಮದುವೆಯಾಗಿ ಶೆಟ್ಟಿಹಳ್ಳಿ ಬಡಾವಣೆಯ ಮುನ್ಸಿಪಾಲ್ ಕಾಲೇಜೋದರ ಹಿಂಭಾಗದಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು.
ಇವರಿಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ರಾತ್ರಿ ಅನುಷಾ ಜೊತೆ ಯಾವುದೋ ವಿಚಾರವಾಗಿ ಅಭಿಲಾಶ್ ಗಲಾಟೆ ಮಾಡಿದ್ದಾನೆ. ಆದರೆ ಬೆಳಗಾಗುವಷ್ಟರಲ್ಲಿ ಅನುಷಾ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿದು ಅನುಷಾ ಪೋಷಕರು ಸ್ಥಳಕ್ಕೆ ಆಗಮಿಸಿದ್ದು , ತಮ್ಮ ಮಗಳನ್ನು ಅಭಿಲಾಶನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ವಿಷಯ ತಿಳಿದು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತಳ ಪೋಷಕರು ನೀಡಿದ ದೂರಿನ್ವಯ ಅಭಿಲಾಶನನ್ನು ವಶಕ್ಕೆ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.