ನರೇಗಾ ಅಕ್ರಮ ಪ್ರಶ್ನಿಸಿದ್ದಕ್ಕೆ ಸಾತನೂರ್ ನಲ್ಲಿ ಯುವಕನ ಹತ್ಯೆ?

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿಯ ಹಲಸಿನಮರದದೊಡ್ಡಿ ಗ್ರಾಮದಲ್ಲಿ ಗುರುವಾರ ಸಂಜೆ ಮೂರ್ತಿ (30) ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದ್ದು, ನರೇಗಾ ಅಕ್ರಮ ಪ್ರಶ್ನಿಸಿದ್ದಕ್ಕೆ ಈ ಹತ್ಯೆ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ನಡೆದಿರುವ ನರೇಗಾ ಕಾಮಗಾರಿಗಳ ವಿವರವನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಂಡಿದ್ದ ಮೂರ್ತಿ, ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಕುರಿತು ನರೇಗಾ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿದ್ದರು.
‘ಅಕ್ರಮ ನಡೆಸಿದ್ದವರು ತಂಡ ಕಟ್ಟಿಕೊಂಡು ಮೂರ್ತಿ ಮೇಲೆ 2–3 ಬಾರಿ ಹಲ್ಲೆ ನಡೆಸಿದ್ದರು. ಈ ವೈಷಮ್ಯದಿಂದಲೇ ಅವರ ಹತ್ಯೆ ನಡೆದಿದೆ’ ಎಂದು ಕುಟುಂಬ ದೂರಿದೆ.
ಒಬ್ಬ ವಶಕ್ಕೆ:
ತಾನೇ ಹತ್ಯೆ ಮಾಡಿರುವುದಾಗಿ ಮೂರ್ತಿ ಸಂಬಂಧಿಕ ಚೇತನ್ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದಾನೆ. ಆದರೆ, ಕುಟುಂಬ ಇದನ್ನು ನಿರಾಕರಿಸಿದ್ದು, 8–10 ಮಂದಿ ಗುಂಪು ಸೇರಿಕೊಂಡು ಈ ಹತ್ಯೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು.
ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸುವ ಭರವಸೆ ನೀಡಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಶುಕ್ರವಾರ ಹಲಸಿನಮರದದೊಡ್ಡಿ ಗ್ರಾಮದಲ್ಲಿ ಮೂರ್ತಿ ಅಂತ್ಯಕ್ರಿಯೆ ನಡೆಯಿತು.