ರಾಜ್ಯ

ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರ.. ʼಸುಳ್ಳು ಸತ್ಯವಾಗುವುದಿಲ್ಲʼ

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಮೇಲೆ ನಡೆದ ಅಮಾನವೀಯ ಘಟನೆ ಚಂದನವದ ಕಲಾದರ ಮನಸ್ಸಿಗೆ ನೋವುಂಟು ಮಾಡಿದೆ. ಮೊನ್ನೆ ಸುದೀಪ್‌ ಅವರು ದರ್ಶನ ಅವರ ಪರ ನಿಂತು ಅಭಿಮಾನಿಗಳಿಗೆ ಬುದ್ದಿಮಾತು ಹೇಳುವ ಕೆಲಸ ಮಾಡಿದ್ದರು.

ಇದೀಗ ದೊಡ್ಮನೆ ಕುಡಿ ನಟ ಯುವ ರಾಜಕುಮಾರ ಅವರು ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಮೌನ ಮುರಿದಿದ್ದಾರೆ.ಈ ಕುರಿತು ಯುವ ರಾಜ್‌ಕುಮಾರ್‌ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಸುದೀರ್ಘ ಬರಹ ಬರೆದುಕೊಂಡಿರುವ ಪೋಸ್ಟ್‌ ಹಂಚಿಕೊಂಡಿರುವ ಅವರು, ʼನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ ಚಿಕ್ಕವನು.

ಆದ್ರೆ, ತುಂಬ ಹೆಮ್ಮೆಯಿಂದ ಒಂದು ವಿಷಯ ಹೇಳೋಕಂದ್ರೆ.. ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರ ಕಾಲದಿಂದ, ಇವತ್ತಿನವರಿಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ ನಡೆದುಕೊಂಡಿದ್ದಾರೆ.

ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ, ಪ್ರೀತಿ ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು.ಆದರೆ, ಗೌರವ ಯಾವಾಗಲೂ ಪರಸ್ಪರ ಅಲ್ವಾ ?.. ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ, ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ .

ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ , ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು ‘ಬಹಿರಂಗವಾಗಿಯೇ’ ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ.ನಡೆದಿರುವ ಕೃತ್ಯ ಖಂಡನೀಯ.

ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ “ಸುಳ್ಳು ಸತ್ಯವಾಗುವುದಿಲ್ಲ”. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ… ಕಾಣುವ ಬುದ್ಧಿ ನಮ್ಮದಾಗಿರಲಿ. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ. ಗುರುರಾಯರ ಆಶೀರ್ವಾದ ಎಲ್ಲರ ಮೇಲೆ ಸದಾ ಸಂಪೂರ್ಣವಾಗಿ ಇರಲಿ.

ಜೈ ಹಿಂದ್ ಜೈ ಕರ್ನಾಟಕ ಮಾತೆ ಎಂದು ಹೇಳಿದ್ದಾರೆ.ಇನ್ನು ಯುವ ಅವರ ಪೋಸ್ಟ್‌ಗೆ ಪರವಾಗಿ ಹಲವಾರು ನೆಟ್ಟಿಗರು ಮತ್ತು ಅಪ್ಪು ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಆದ್ರೆ ಯುವ ಅವರು ಅವರ ಚಿಕ್ಕಪ್ಪ ಪುನೀತ್‌ ರಾಜಕುಮಾರ್‌ ಅವರ ಪರವಾಗಿ ಅಷ್ಟೇ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ಮುಂದೆ ನೋಡಿಕೊಳ್ಳುವುದಾಗಿ ದರ್ಶನ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದರ್ಶನ ಅವರ ಮೇಲೆ ನಡೆದ ಚಪ್ಪಲಿ ಎಸೆತ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸುನಾಮಿಯನ್ನು ಸೃಷ್ಟಿಸಿದ್ದು, ಇದು ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದನ್ನ ಕಾಯ್ದು ನೋಡಬೇಕಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button