
ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನು ನಡು ರಸ್ತೆಯಲ್ಲೇ ಮನ ಬಂದಂತೆ ಥಳಿಸುವ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂ ಧಿಸಿದಂತೆ ಆರೋಪಿ ಪಂಕಜ್ ತ್ರಿಪಾಠಿಗೆ ಸೇರಿದ ಅಕ್ರಮ ಮನೆಯನ್ನು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಆದೇಶದಂತೆ ನೆಲಸಮಗೊಳಿಸಲಾಗಿದೆ.
ಆರೋಪಿ ಮೌಗಂಜ್ ಪ್ರದೇಶದ ಧೇರಾ ಗ್ರಾಮದ ನಿವಾಸಿಯಾಗಿದ್ದು, ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.ಕಿಡಿಗೇಡಿಯು ವೃತ್ತಿಯಿಂದ ಚಾಲಕನಾಗಿದ್ದಾನೆ.
ಆತನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಆತನ ಅನಧಿಕೃತ ಮನೆಯನ್ನು ನೆಲಸಮಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಮೌಗಂಜ್ ಪೊಲೀಸ್ ಠಾಣೆಯ ಟಿಐ ಅವರನ್ನು ಅಮಾನತುಗೊಳಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.
ಯುವತಿ ತನಗೆ ಹೊಡೆದವನನ್ನು ಮನ್ನಿಸಿದ್ದು, ವೀಡಿಯೊ ಚಿತ್ರೀಕರಿಸಿದವನ ವಿರುದ್ಧವೇ ದೂರು ನೀಡಿದ್ದಾಳೆ. ಹಲ್ಲೆಯ ವೀಡಿಯೊ ಮಾಡಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.