ರಾಷ್ಟ್ರಿಯಸಿನಿಮಾ

ನಟ ಮಹೇಶ್ ಬಾಬು ತಂದೆ, ‘ಸೂಪರ್ ಸ್ಟಾರ್‌’ ಕೃಷ್ಣ ಇನ್ನಿಲ್ಲ

ತೆಲುಗಿನ ‘ಸೂಪರ್ ಸ್ಟಾರ್’ ಕೃಷ್ಣ ಅವರು ನಿಧನರಾಗಿದ್ದಾರೆ. ಸೋಮವಾರ (ನ.14) ಬೆಳಗಿನಜಾವ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ, ಕೃಷ್ಣ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಕೃಷ್ಣ ಅವರು ಮಂಗಳವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಕೃಷ್ಣ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಪಾರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೃಷ್ಣ ಅವರಿಗೆ 79 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ ಸೋಮವಾರ ಬೆಳಗಿನಜಾನ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರು ಲಘು ಹೃದಯಾಘಾತದಿಂದ ಬಳಲುತ್ತಿದ್ದರು. ತಕ್ಷಣವೇ ಅವರಿಗೆ ಹೃದ್ರೋಗ ತಜ್ಞರು ಅಗತ್ಯ ಚಿಕಿತ್ಸೆ ನೀಡಿದ್ದಾರೆ. ಮುಂದಿನ 24 ಅಥವಾ 48 ಗಂಟೆಗಳು ಬಹಳ ಕಠಿಣವಾಗಿವೆ. ಪ್ರತಿ ಗಂಟೆಯೂ ಈಗ ಮುಖ್ಯವಾಗಿದೆ..’ ಎಂದು ವೈದ್ಯರು ಹೇಳಿದ್ದರು. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಕೃಷ್ಣ ಅವರು ಬೇಗ ಗುಣವಾಗಲಿ ಎಂದು ಹಾರೈಸಿದ್ದರು. ಆದರೆ ಯಾರ ಹಾರೈಕೆಗಳು ಫಲಿಸಲಿಲ್ಲ.

ಘಟ್ಟಮನೇನಿ ಕುಟುಂಬಕ್ಕೆ ಆಘಾತಗಳ ಮೇಲೆ ಆಘಾತ
2022ರ ಜನವರಿಯಲ್ಲಿ ಸೂಪರ್ ಸ್ಟಾರ್ ಕೃಷ್ಣ ಅವರ ಹಿರಿಯ ಪುತ್ರ, ಮಹೇಶ್‌ ಬಾಬು ಅವರ ಸಹೋದರ ರಮೇಶ್ ಬಾಬು ಅನಾರೋಗ್ಯದಿಂದ ನಿಧನರಾಗಿದ್ದರು. ಈಚೆಗಷ್ಟೇ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಘಟ್ಟಮನೇನಿ ಅವರು ಕೂಡ ನಿಧನರಾಗಿದ್ದರು. ಈಗ ಕೃಷ್ಣ ಅವರು ನಿಧನರಾಗಿರುವುದು ಘಟ್ಟಮನೇನಿ ಕುಟುಂಬಕ್ಕೆ ಭರಿಸಲಾಗದ ಆಘಾತವನ್ನು ನೀಡಿದೆ.

ಗುಂಟೂರು ಜಿಲ್ಲೆಯ ಬುರ್ರೆಪಾಲೆಂನಲ್ಲಿ 1943ರಲ್ಲಿ ಜನಿಸಿದ ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ. ಚಿತ್ರರಂಗದಲ್ಲಿ ಅವರು ಕೃಷ್ಣ ಎಂದೇ ಪ್ರಸಿದ್ಧಿ ಪಡೆದರು. ಅವರು 1965ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಸುಮಾರು 55 ವರ್ಷಕ್ಕೂ ಅಧಿಕ ಸಮಯ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದ ಕೃಷ್ಣ ನಟಿಸಿರುವ ಸಿನಿಮಾಗಳ ಸಂಖ್ಯೆ 350ಕ್ಕೂ ಅಧಿಕ. ಅವರ ಮಗ ಮಹೇಶ್‌ ಬಾಬು ಟಾಲಿವುಡ್‌ನ ಸ್ಟಾರ್ ನಟ. ಅಂದಹಾಗೆ, ಸೂಪರ್‌ ಸ್ಟಾರ್‌ ಕೃಷ್ಣಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಇಂದಿರಾ ದೇವಿ ಅವರು ಈಚೆಗಷ್ಟೇ ನಿಧನರಾದರು. 45ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಜೊತೆಗೆ ನಾಯಕಿಯಾಗಿ ನಟಿಸಿದ್ದ ವಿಜಯಾ ನಿರ್ಮಲಾ ಅವರೊಂದಿಗೆ ಕೃಷ್ಣ 2ನೇ ಮದುವೆ ಆಗಿದ್ದರು. 2019ರಲ್ಲಿ ವಿಜಯಾ ನಿರ್ಮಲಾ ಅವರು ನಿಧನರಾದರು.

ಪ್ರಶಸ್ತಿಗಳು
‘ಸೂಪರ್ ಸ್ಟಾರ್’ ಕೃಷ್ಣ ಅವರಿಗೆ ಭಾರತ ಸರ್ಕಾರವು 2009ರಲ್ಲಿ ‘ಪದ್ಮಭೂಷಣ’ ನೀಡಿ ಗೌರವಿಸಿದೆ. ಆಂಧ್ರ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ. ‘ಅಲ್ಲೂರಿ ಸೀತಾರಾಮ ರಾಜು’ ಚಿತ್ರದ ನಟನೆಗಾಗಿ ‘ನಂದಿ ಪ್ರಶಸ್ತಿ’, 2003ರಲ್ಲಿ ಎನ್‌ಟಿಆರ್ ನ್ಯಾಷನಲ್‌ ಅವಾರ್ಡ್, ಜೀವಮಾನ ಸಾಧನೆಗಾಗಿ 1997ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ನೀಡಲಾಗಿತ್ತು.

ಸೂಪರ್ ಸ್ಟಾರ್’ ಕೃಷ್ಣ ನಟನೆಯ ಟಾಪ್ ಸಿನಿಮಾಗಳು
ಗೂಢಚಾರಿ 116
ಪ್ರೈವೆಟ್ ಮಾಸ್ಟರ್‌
ಮಂಚಿ ಕುಟುಂಬಂ
ಮೋಸಗಾಡಿಕಿ ಮೋಸಗಾಳ್ಳು
ಪಂಡತಿ ಕಪೂರಂ
ಅಲ್ಲೂರಿ ಸೀತಾರಾಮರಾಜು
ರಾಮ್ ರಾಬರ್ಟ್ ರಹೀಂ
ಮುಂದಡುಗು
ಸಿಂಹಾಸನಂ
ನಂಬರ್ 1

Related Articles

Leave a Reply

Your email address will not be published. Required fields are marked *

Back to top button