
ಬೆಂಗಳೂರಿನಲ್ಲಿ ಓಡಾಡುವ ಯಾರಿಗೆ ಆದರೂ ಈ ದೃಶ್ಯ ಸರ್ವೇಸಾಮಾನ್ಯ. ರಸ್ತೆಯಲ್ಲಿ ಹಾದುಹೋಗುವ ಹತ್ತು ಆಟೋಗಳಲ್ಲಿಕನಿಷ್ಠ ಆರು ಆಟೋಗಳ ಮೇಲೆ ನಗುಮೊಗದ ಶಂಕರ್‌ನಾಗ್ ( Shankar Nag ) ಚಿತ್ರ! ಏನಿದರ ಮರ್ಮ?
ಅಲ್ಪ ಅವಧಿಯಲ್ಲಿಅಪಾರ ಸಾಧನೆ, ಜನಪ್ರೀತಿ, ಅಭಿಮಾನ, ಶ್ರಮಜೀವಿಗಳ ಸಖ್ಯ ಇವೆಲ್ಲವನ್ನೂ ದಕ್ಕಿಸಿಕೊಂಡ ದೈತ್ಯಪ್ರತಿಭೆ ಶಂಕರ್. ಆತ ಗತಿಸಿ ಮೂವತ್ತೆರಡು ವರ್ಷಗಳಾದರೂ ಶ್ರೀಸಾಮಾನ್ಯರ ಬದುಕಿನೊಳಗೆ ಇನ್ನೂ ಜೀವಂತವಾಗಿರುವುದು ನಿಜಕ್ಕೂ ಅಚ್ಚರಿ.
ಇದು ಏಕೆ? ಹೇಗೆ? ಎಂದು ಹಲವು ಬಾರಿ ನನ್ನನ್ನು ಕಾಡಿದೆ; ನನ್ನಂತೆ ಅನೇಕರನ್ನೂ ಕಾಡಿರಲೂಬಹುದು. 80ರ ದಶಕದ ಆರಂಭದ ವರ್ಷಗಳಲ್ಲಿ, ರವೀಂದ್ರ ಕಲಾಕ್ಷೇತ್ರದಲ್ಲಿನಾನು ಶಂಕರ್‌ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ.
‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ನಾಟಕದ ನೂರನೇ ಪ್ರದರ್ಶನ. ಅರುಂಧತಿ, ರಮೇಶ್ ಭಟ್ ಅಲ್ಲೇ ಇದ್ದರು. ರಂಗ ಪತ್ರಿಕೆ ‘ಸೂತ್ರಧಾರ’ಕ್ಕೆ ಒಂದು ಲೇಖನ ಸಿದ್ಧಪಡಿಸುವುದು ನನ್ನ ಉದ್ದೇಶ.
ಶಂಕರ್ ತಮ್ಮ ಎಂದಿನ ಸರಳತೆ, ನಿರಭಿಮಾನದಲ್ಲಿಮುಳುಗಿದ್ದರು- ಅರುಂಧತಿ, ರಮೇಶ್ ಭಟ್ಟರೇ ಹೆಚ್ಚು ಅನಿಸಿಕೆ ಹಂಡಿಕೊಂಡರು.
ಮಿಕ್ಕ ವಿಷಯಗಳನ್ನು ನಾಟಕದ ರೂಪಾಂತರಕಾರ, ಈ ನಾಟಕದ ಜಂಟಿ-ನಿರ್ದೇಶಕ, ವಿಶಿಷ್ಟ ಪ್ರತಿಭಾನ್ವಿತ ಟಿ.ಎಸ್. ನರಸಿಂಹನ್ ವಿವರಿಸಿದರು.
ಈ ಮೊದಲ ಭೇಟಿಯ ಗುಂಗು ಮಾತ್ರ ಹಾಗೆ ಮುಂದುವರಿದಿತ್ತು. ಶಂಕರ್ ಕಲಾತ್ಮಕ/ ವಾಣಿಜ್ಯ ಎರಡರಲ್ಲೂಪರಿಚಿತನೆನಿಸಿ, ಸ್ವಲ್ಪ ಮಟ್ಟಿಗೆ ಸ್ಟಾರ್ ವ್ಯಾಲ್ಯೂ ಕೂಡ ಗಳಿಸಿದ್ದ ದಿನಗಳವು.
ಹವ್ಯಾಸಿಗಳಾದ ನಮ್ಮಂಥವರಿಗೆಲ್ಲ ಶಂಕರ್ ಬಗ್ಗೆ ಬೆರಗು- ಅಚ್ಚರಿ. ಎಷ್ಟು ಸಿಂಪಲ…?
ಎಲ್ಲರೊಂದಿಗೆ, ಎಲ್ಲೆಂದರಲ್ಲಿಹಮ್ಮು- ಬಿಮ್ಮುಗಳ ಪೊರೆಯೇ ಇಲ್ಲದೆ ಬೆರೆಯುವ ರೀತಿ ಇಂದಿಗೂ ಸ್ಮರಣೀಯ. ಬಿಜಿ ಶೂಟಿಂಗ್ ಶೆಡ್ಯೂಲ್‌ನ ಮಧ್ಯದಲ್ಲೂ(ಆಗೆಲ್ಲಮದ್ರಾಸ್ ಶೂಟಿಂಗ್)
‘ನೋಡಿ ಸ್ವಾಮಿ ನಾಟಕ’ವೆಂದರೆ ಗೆರೆ ಕೊರೆದಂತೆ ಪ್ರದರ್ಶನದ ಸಮಯಕ್ಕೆ ತಪ್ಪದೇ ಹಾಜರ್. ತುಂಬಿದ ಪ್ರೇಕ್ಷಾಂಗಣಕ್ಕೆ ರಸದೌತಣ, ಚಪ್ಪಾಳೆ, ಹರ್ಷೋದ್ಗಾರ.
ವೈಎನ್ಕೆ ಜೊತೆ ಶಂಕರ್ ಸಿಕ್ಕಾಗ ಹಿಂದಿ ನಾಟಕಗಳ ಬಗ್ಗೆ ಶಂಕರ್ ಶೇಷ್, ಮೋಹನ್ ರಾಕೇಶ್, ಧರ್ಮವೀರ ಭಾರತಿ ಅವರ ನಾಟಕಗಳ ಬಗ್ಗೆ ವಿಜಯ್ ತೆಂಡೂಲ್ಕರ್ ನಾಟಕದ ಬಗ್ಗೆ ಹಾಗೆಯೇ ನಾನು ಅನುವಾದಿಸಿದ ಕೆಲವು ನಾಟಕಗಳ ಬಗ್ಗೆಯೂ ಹರಟಿದ್ದರು.
ಮುಂದೆ ‘ಮಾಲ್ಗುಡಿ ಡೇಸ್’ ಧಾರಾವಾಹಿಯ ಸಂದರ್ಭದಲ್ಲಿ ಶಂಕರ್ ಜೊತೆ ಇನ್ನಷ್ಟು ನಿಕಟವಾಗುವ ಅವಕಾಶ. ಬಸವಗುಡಿಯ ಒಂದು ಮನೆಯಲ್ಲಿ‘ಮಾಲ್ಗುಡಿ ಡೇಸ್’ ಶೂಟಿಂಗ್‌ನಲ್ಲಿ ಶಂಕರ್ ಪಾದರಸದಂತೆ ಓಡಾಡುತ್ತ,
ಮಾಸ್ಟರ್ ಮಂಜುನನ್ನು ಹೆಗಲಮೇಲೆ ಕೂರಿಸಿಕೊಂಡು ಶೂಟಿಂಗ್ ನಡುವೆ ರಿಲ್ಯಾಕ್ಸ್ ಮಾಡುತ್ತಾ, ತಮಾಷೆಯಲ್ಲಿ ನಿರತರಾಗಿದ್ದರು. ನನಗಿನ್ನೂ ನೆನಪಿದೆ, ಶಂಕರ ಅಂದು ಅಭಿನಯಿಸುತ್ತ ಹೇಳಿದ ಆ ಜೋಕು- ವೈಎನ್ಕೆಗೂ ಬಲು ಅಚ್ಚುಮೆಚ್ಚು.
ಒಂದು ಊರಿಗೆ ಸರ್ಕಸ್ ಕಂಪನಿ ಬಂದಿತ್ತು. ಅದರ ಕಲೆಕ್ಷನ್ ಅಷ್ಟೇನೂ ಚೆನ್ನಾಗಿರಲಿಲ್ಲ. ಏನೇನೋ ಸರ್ಕಸ್ ಮಾಡಿದರೂ ಗಲ್ಲಾಪೆಟ್ಟಿಗೆ ಚೇತರಿಸಿಕೊಳ್ಳುತ್ತಲೇ ಇಲ್ಲಾ.
ಆ ಊರಲ್ಲಿಒಬ್ಬ ತಿಂಡಿಪೋತನಿದ್ದ. 20 ಇಡ್ಲಿ, 20 ದೋಸೆ, 10 ಒಡೆ, 30 ಸಕ್ರೆ ಬೊಂಬೆ, 20 ಒಬ್ಬಟ್ಟು ಹೀಗೆ ಯಥೇಷ್ಟ ತಿಂದು ತೇಗುವುದು ಪಂದ್ಯ ಗೆಲ್ಲುವುದೇ ಆತನ ಕೆಲಸ. ಸರ್ಕಸ್ ಕಂಪನಿ ಮಾಲೀಕನ ಕಣ್ಣಿಗೆ ಆತ ಬಿದ್ದ.
ಯಾಕೆ ಇವನನ್ನು ಕಂಪನಿ ಸೇರಿಸಿಕೊಂಡು ಇವನದೇ ಒಂದು ಐಟಂ ಇಟ್ಟುಕೊಳ್ಳಬಾರದೆಂದು ಯೋಚಿಸಿ ಅವನನ್ನು ಸಂಪರ್ಕಿಸಿ ಒಳ್ಳೆಯ ಸಂಬಳದ ಆಫರ್ ಕೊಟ್ಟ. ಕೊನೆಗೂ ತಿಂಡಿಪೋತ ಒಪ್ಪಿಕೊಂಡ.
ಇವನ ಶೋಗೆ ಭಾರೀ ಪ್ರಚಾರ ಸಿಕ್ಕಿತು. ಜನವೋ ಜನ. ಕಲೆಕ್ಷನ್ ಹೆಚ್ಚಿತು. ದಿನಕ್ಕೆ ಎರಡು, ಮೂರು, ನಾಲ್ಕು… ಹೀಗೆ ಶೋಗಳ ಸಂಖ್ಯೆಯೂ ಏರಿತು. ಮಾಲೀಕ ಭರ್ಜರಿ ಹಣ ಬಾಚಿದ. ತಿಂಡಿಪೋತನೂ ಖುಷ್.
ಹೀಗಿರುವಾಗ ಒಮ್ಮೆ ತಿಂಡಿಪೋತ ಸಪ್ಪಗಾದ. ‘‘ಆಗೋಲ್ಲಸಾರ್… ನನಗೆ ಈ ಕೆಲಸ ಬೇಡಾ, ನನ್ನನ್ನು ಬಿಟ್ಟು ಬಿಡಿ. ತಗೋಳಿ ರಾಜೀನಾಮೆ,’’ ಅಂದುಬಿಡೊದೇ! ಮಾಲೀಕನ ಉಸಿರೇ ಉಡುಗಿ ಕುಸಿಯುವುದೊಂದು ಬಾಕಿ.
ತಿಂಡಿಪೋತನ ಓಲೈಕೆಗೆ ಎಲ್ಲಾ ಅಸ್ತ್ರ ಬಳಸಿದ. ಊಹ್ಞೂಂ! ತಿಂಡಿಪೋತ ಒಪ್ಪಲೇ ಇಲ್ಲ. ‘‘ನೀನು ಕೇಳಿದಷ್ಟು ದುಡ್ಡು ಕೊಡುವೆ’’ ಅಂದರೂ ಸಮ್ಮತಿ ಸೂಚಿಸಲಿಲ್ಲ. ‘‘ಹೇಳು, ನೀನು ಕೆಲಸಬಿಡಲು ಕಾರಣವೇನು?,’
’ ಅಂತ ಮಾಲೀಕ ಕೇಳಿದ. ಆಗ ತಿಂಡಿಪೋತ ಕೊಟ್ಟ ಕಾರಣ ಕೇಳಿ; ‘‘ಏನ್ ಸಾಹುಕಾರ್ರೇ, ನನ್ನ ಬಗ್ಗೆ ನಿಮಗೆ ಸ್ವಲ್ಪಾನೂ ಕಾಳಜಿ ಇಲ್ಲ. ಅಲ್ಲಾ ಸ್ವಾಮಿ, ದಿನಕ್ಕೆ ಮೂರ್ನಾಲ್ಕು ಆಟ ಇಟ್ಟುಕೊಂಡಿದೀರಿ;
ಮಧ್ಯಾಹ್ನದ ಶೋನಲ್ಲಿ20 ಇಡ್ಲಿ, 20ದೋಸೆ, 10 ವಡೆ,20 ಮೈಸೂರು ಪಾಕ್ ತಿನ್ಬೇಕು, ಫಸ್ಟ್ ಶೋದಲ್ಲಿಅದೇ ರಿಪೀಟ್, ಸೆಕೆಂಡ್ ಶೋನಲ್ಲಿ ಮತ್ತೆ ಅಷ್ಟೂ ಖಾಲಿ ಮಾಡಬೇಕು- ಹೀಗಾದ್ರೆ ನನಗೆ ಲಂಚ್ ಟೈಮ್ ಯಾವಾಗ?
ನಾನು ಯಾವಾಗ ಊಟ ಮಾಡೋದು? ನನಗೂ ಹೊಟ್ಟೆ ಇದೆ, ಅಷ್ಟೂ ಅರ್ಥವಾಗಲ್ವಾ?,’’ ಎಂದಾಗ ಕಂಪನಿ ಮಾಲೀಕ ಮೂರ್ಛೆ ಹೋಗುವುದೊಂದು ಬಾಕಿ!
ಗಿರೀಶ್ ಕಾರ್ನಾಡರ ‘ನಾಗಮಂಡಲ’ ನಾಟಕ ರೆಡಿಯಾಗಿ ಬಂದಾಗ ಶಂಕರ್ ಅದನ್ನು ಪ್ರದರ್ಶಿಸಲು ಆಯ್ಕೆ ಮಾಡಿಕೊಂಡದ್ದು, ಚಿತ್ರಕಲಾ ಪರಿಷತ್‌ನ ಬಯಲು ಪ್ರದೇಶವನ್ನು.
ಸುತ್ತಲೂ ಮರ-ಗಿಡ, ಬಂಡೆ, ಒಂದು ದೇವಾಲಯದಂಥ ಹಳೆಯ ಶಿಲಾ ಕಟ್ಟಡ ಇವುಗಳನ್ನು ಬಳಸಿಕೊಂಡು, ಗೆಳೆಯ ಗೋಪಾಲ್ ವಾಜಪೇಯಿ ರಚಿಸಿದ ಸೊಗಸಾದ ಹಾಡು- ಸಿ. ಅಶ್ವಥ್ ಸುಮಧುರ ಸಂಗೀತದೊಂದಿಗೆ, ಬಿ.ಜಯಶ್ರೀ ಕುರುಡವ್ವನಾಗಿ, ರಮೇಶ್ ಭಟ್ ಹೆಗಲಮೇಲೆ ಸವಾರಿ ಮಾಡುತ್ತಾ,
ಶಂಕರ- ಅರುಂಧತಿಯರ ಮುಖ್ಯ ಪಾತ್ರದಲ್ಲಿಕಟ್ಟಿದ ಆ ನಾಟಕ ಅದ್ಭುತ. ಮೂವತೈದು ವರ್ಷಗಳ ಬಳಿಕವೂ ಆ ದೃಶ್ಯಗಳು ಕಣ್ಮುಂದೆ ಕಟ್ಟಿದಂತಿವೆ. ವಾರಪೂರ್ತಿ ಪ್ರದರ್ಶನ ಕಂಡು ಬೆರಗು ಮೂಡಿಸಿದ್ದ ಪ್ರಯೋಗವದು.
ಶಂಕರ್‌ನ ಮೊದಲಿನ ಪ್ರಯೋಗಗಳಾದ ‘ಅಂಜು ಮಲ್ಲಿಗೆ’, ‘ಸಂಧ್ಯಾ ಛಾಯಾ’ ನಾನು ನೋಡಲಾಗಿರಲಿಲ್ಲ. ‘ನಾಗಮಂಡಲ’ದಂಥ ಒಂದು ಪ್ರಯೋಗ ಸಾಕು ಶಂಕರ್‌ನ ದೈತ್ಯ ಪ್ರತಿಭೆ ಕಣ್ತುಂಬಿಸಿಕೊಳ್ಳಲು/ ಮೆಚ್ಚಿಕೊಳ್ಳಲು.
ಮಿಂಚಿನ ಓಟ’- ಶಂಕರ್ ನಿರ್ಮಿಸಿ, ನಿರ್ದೇಶಿಸಿ ಪ್ರಶಸ್ತಿ ಬಾಚಿಕೊಂಡ ಚಿತ್ರ. ಶಂಕರ್ ಬದುಕೂ ಮಿಂಚಿನ ಓಟದಂತೆಯೇ. ಹನ್ನೆರಡು ವರ್ಷಗಳ ಚಿತ್ರ ಜೀವನದಲ್ಲಿಹತ್ತಿರ ಹತ್ತಿರ ನೂರು ಸಿನಿಮಾಗಳನ್ನು ಪೂರೈಸಿ ಕಲಾತ್ಮಕ, ಜನಪ್ರಿಯ, ಕಿರುತೆರೆ ಹೀಗೆ ಕೈ ಇಟ್ಟಲ್ಲೆಲ್ಲ ಗೆಲುವು ಸಾಧಿಸಿ ಮಿಂಚಿ ಮಾಯವಾದ ತಾರೆ ಶಂಕರ್.
ಆತ ಬದುಕಿದ್ದಿದ್ದರೆ ಈಗ ನಮ್ಮೊಂದಿಗೆ ಎಪ್ಪತ್ತರೆತ್ತರಕ್ಕೆ (ಜನ್ಮದಿನ: 1954, ನವೆಂಬರ್ 9) ಏರಿರುತ್ತಿದ್ದ. ನಂದಿ ಬೆಟ್ಟಗಳಿಗೆ ರೋಪ್ ವೇ, ವೈವಿಧ್ಯಮಯ ಮೆಟ್ರೋ, ಕಡಿಮೆ ವೆಚ್ಚದ ಬೆಚ್ಚನೆ ಮನೆಗಳು, ರಂಗ ಮಂದಿರಗಳು, ಸ್ಟುಡಿಯೋಗಳು, ಮತ್ತಷ್ಟು ಒಳ್ಳೆಯ ನಾಟಕ/ ಚಿತ್ರಗಳು- ಇನ್ನೂ ಹಲವು ವಿಸ್ಮಯಗಳನ್ನು ಈ ನಾಡು ಕಾಣಬಹುದಾಗಿತ್ತು.