ನಟ ದರ್ಶನ್, ಶ್ಯಾಮನೂರು ಕಟ್ಟಡಗಳಿಗೂ ಕಾದಿದೆ ಗ್ರಹಚಾರ..!

ಕೆಲವು ಘಟಾನುಘಟಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಪ್ಲಾನ್ ರೂಪಿಸುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿ ಖ್ಯಾತ ಚಿತ್ರ ನಟ ದರ್ಶನ್ ಮನೆ ಹಾಗೂ ಹಿರಿಯ ರಾಜಕಾರಣಿ ಶ್ಯಾಮನೂರು ಶಿವಶಂಕರಪ್ಪಒಡೆತನದ ಆಸ್ಪತ್ರೆಯನ್ನು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ.
ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಿಬಿಎಂಪಿ ಹಿರಿಯ ಅಧಿಕಾರಿಗಳು ಖ್ಯಾತ ವ್ಯಕ್ತಿಗಳು ನಿರ್ಮಿಸಿಕೊಂಡಿರುವ ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟರೆ ಆ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಸಾಧ್ಯತೆಗಳಿವೆ.
ಅದೇ ರೀತಿ ನಗರದ ಎಂಟು ವಲಯಗಳಲ್ಲಿ ಘಟಾನು ಘಟಿ ವ್ಯಕ್ತಿಗಳು ಮಾಡಿಕೊಂಡಿರುವ ರಾಜಕಾಲುವೆ, ಕೆರೆ ಹಾಗೂ ಬಫರ್ ಜೋನ್ ಒತ್ತುವರಿ ತೆರವಿಗೂ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಪಾಲಿಕೆಯ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಲಾಗಿದೆ.ಶಾಂತಿನಿಕೇತನ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ.
ರಾಜಕಾಲುವೆ ಒತ್ತುವರಿ ಮಾಡಿ ಮೂರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
ಯಾವಾಗ ಬಿಬಿಎಂಪಿಯವರು ಒತ್ತುವರಿ ತೆರವಿಗೆ ಮುಂದಾಗುತ್ತಾರೋ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಎರಡು ಮನೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ಹೀಗಾಗಿ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಒಂದು ಮನೆಯನ್ನು ಜೆಸಿಬಿ ಯಂತ್ರದ ಸಹಾಯದಿಂದ ಇಂದು ನೆಲಸಮಗೊಳಿಸಲಾಯಿತು.
ಕಟ್ಟಡ ನೆಲಸಮಗೊಳಿಸುವ ಸಂದರ್ಭದಲ್ಲಿ ಮನೆ ಮಾಲೀಕರು ಯಾರೂ ಸ್ಥಳದಲ್ಲಿ ಹಾಜರಿರಲಿಲ್ಲ.