ನಕಲಿ NOC ಸೃಷ್ಟಿಸಿ ಭಾರೀ ವಂಚನೆ, 90 ಲಕ್ಷ ಮೌಲ್ಯದ ಕಾರುಗಳ ವಶ

ಕಾರುಗಳಿಗೆ ಸಾಲ ನೀಡಿದ್ದ ಬ್ಯಾಂಕ್ ಮತ್ತು ಫೈನಾನ್ಸ್ಗಳ ನಕಲಿ ಎನ್ಒಸಿಗಳನ್ನು ಸೃಷ್ಟಿಸಿ ಸೆಕೆಂಡ್ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಬನಶಂಕರಿ ಠಾಣೆ ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ ಏಳು ಕಾರು ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಭಾಕರ(40), ಪ್ರಕಾಶ್ ಅಲಿಯಾಸ್ ಚೀಟಿ ಪ್ರಕಾಶ(33) ಮತ್ತು ಕಿರಣ್ (44) ಬಂಧಿತ ವಂಚಕರು. ಆರೋಪಿಗಳಿಂದ 90 ಲಕ್ಷ ರೂ. ಬೆಲೆಬಾಳುವ ಮಾರುತಿ ಸುಜುಕಿ ಸಿಯಾಜ್ ಕಾರು, ಟಯೋಟೊ ಫಾರ್ಚುನರ್, ಟೊಯೊಟೊ ಇನ್ನೋವಾ ಕ್ರಿಸ್ಟಾ, ಟೆಂಪೊ ಟ್ರಾವೆಲ್ಲರ್, 2 ಹುಂಡೈ ಐ20 ಕಾರು ಮತ್ತು ಸುಜುಕಿ ಸ್ವಿಪ್ಟ್ ಡಿಸೈರ್ ಕಾರುಗಳು ಹಾಗೂ ವಿವಿಧ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಮಾರ ನಾಯಕ್ ಎಂಬುವರ ಮಾರುತಿ ಸುಜುಕಿ ಸಿಯಾಜ್ ಕಾರಿನ ನೋಂದಣಿ ಸಂಖ್ಯೆಯನ್ನು ಆರೋಪಿಗಳು ಬೇರೊಂದು ಕಾರಿಗೆ ಅಳವಡಿಸಿ ಅಕ್ರಮವಾಗಿ ಬಳಸಿಕೊಂಡು ತುಮಕೂರು ಆರ್ಟಿಒ ಕಚೇರಿಯಲ್ಲಿ ಕಾರಿನ ಮಾಲೀಕತ್ವ ಬದಲಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕುಮಾರ ನಾಯಕ್ ಅವರ ಕಾರಿನ ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಹಾಕಿಕೊಂಡಿದ್ದ ಚಂದಪ್ರಕಾಶ್ ಎಂಬುವರಿಗೆ ಸೇರಿದ ಸುಜುಕಿ ಸಿಯಾಜ್ ಕಾರನ್ನು ಪತ್ತೆ ಮಾಡಿ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳು ಹಳದಿ ಬೋರ್ಡ್ನ ನೋಂದಣಿ ಸಂಖ್ಯೆ ಇರುವ ಸುಜುಕಿ ಸಿಯಾಜ್ ಕಾರಿನ ಸಾಲ ಬಾಕಿ ಇದ್ದ ಕಾರಣ ಅದೇ ಮಾಡೆಲ್ ಮತ್ತು ಬಣ್ಣದ ಪಿರ್ಯಾದುದಾರರ ಕಾರಿನ ನೋಂದಣಿ ಸಂಖ್ಯೆಯನ್ನು ತಮ್ಮ ಕಾರಿನಲ್ಲಿ ಬಳಸಿಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇದರಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಗಳು ಇತರೆ ತಲೆಮರೆಸಿಕೊಂಡಿರುವ ಆರೋಪಿಗಳೊಂದಿಗೆ ಸೇರಿಕೊಂಡು ಬೆಂಗಳೂರು, ತುಮಕೂರು, ನೆಲಮಂಗಲ, ಮಂಡ್ಯ ಮುಂತಾದ ಕಡೆಗಳಲ್ಲಿ ಬ್ಯಾಂಕ್ ಮತ್ತು ಫೈನಾನ್ಸ್ ಕಂಪೆನಿಗಳಿಂದ ಸಾಲ ಪಡೆದು ಬಾಕಿ ಉಳಿಸಿಕೊಂಡಿದ್ದ ಕಾರುಗಳ ಮಾಲೀಕರೊಂದಿಗೆ ಶಾಮೀಲಾಗಿರುವುದು ಕಂಡುಬಂದಿದೆ.
ಅಲ್ಲದೆ ಈ ಕಾರುಗಳ ಮೇಲಿನ ಸಾಲವನ್ನು ತಾವೇ ಕಟ್ಟುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ಕಾರುಗಳನ್ನು ಖರೀದಿಸಿಕೊಂಡು ಬಂದು ಸಾಲ ಬಾಕಿ ಇರುತ್ತಿದ್ದ ಕಾರುಗಳನ್ನು ಸಂಬಂಧಪಟ್ಟ ಫೈನಾನ್ಸ್ ಅಥವಾ ಬ್ಯಾಂಕ್ಗಳ ಸಾಲ ಮುಕ್ತಾಯವಾಗಿರುವಂತೆ ಬಿಂಬಿತವಾಗುವ ರೀತಿಯಲ್ಲಿ ಎನ್ಒಸಿ ಪತ್ರ ಮತ್ತು ಲೋನ್ ಅಗ್ರಿಮೆಂಟ್ ಟರ್ಮಿನೇಷನ್ ಪತ್ರಗಳನ್ನು ನಕಲಿಯಾಗಿ ಕಂಪ್ಯೂಟರ್ನಲ್ಲಿ ಟೈಪ್ ಮಾಡಿ ಪ್ರಿಂಟ್ಔಟ್ ತೆಗೆದು ದಾಖಲಾತಿಗಳನ್ನು ಸೃಷ್ಟಿಸಿಕೊಂಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಆರೋಪಿಗಳು ನಕಲಿ ಎನ್ಒಸಿ ಪತ್ರಗಳನ್ನು ಬಳಸಿಕೊಂಡು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಅಕ್ರಮವಾಗಿ ಮಾರಾಟ ಮಾಡಿದ್ದ 90 ಲಕ್ಷ ಬೆಲೆಬಾಳುವ ವಿವಿಧ ಏಳು ಕಾರುಗಳು ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಕಲಿ ಎನ್ಒಸಿ ಸೃಷ್ಟಿ: ಆರೋಪಿಗಳು ಕೆನರಾ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಟಯೋಟೋ ಫೈನಾನ್ಸ್, ಚೋಳಮಂಡಲಂ ಫೈನಾನ್ಸ್, ಮಹೀಂದ್ರ ಫೈನಾನ್ಸ್ ಸೇರಿದಂತೆ ಇತರೆ ಫೈನಾನ್ಸ್ ಕಂಪೆನಿಗಳ ನಕಲಿ ಎನ್ಒಸಿಗಳನ್ನು ಸೃಷ್ಟಿಸಿಕೊಂಡು ಫೈನಾನ್ಸ್ ಕಂಪೆನಿಗಳಿಗೆ ಮತ್ತು ಗ್ರಾಹಕರಿಗೆ ಮೋಸ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಬನಶಂಕರಿ ಠಾಣೆ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಅವರ ನೇತೃತ್ವದ ಸಿಬ್ಬಂದಿ ತಂಡ ವಂಚಕರನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ರಶಂಸೆ: ಈ ಉತ್ತಮ ಕಾರ್ಯ ಮಾಡಿದ ಅಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರು ಪ್ರಶಂಸಿಸಿದ್ದಾರೆ.