ಅಪರಾಧ

ನಕಲಿ ವೈದ್ಯರಿಗೆ ರಾಜಕಾರಣಿಗಳ ಶ್ರೀರಕ್ಷೆ ಆರೋಪ: ಕೋಲಾರದಲ್ಲಿ ಮಿತಿ ಮೀರಿದ ನಕಲಿ ಕ್ಲಿನಿಕ್‍‍‍‍‍‍‍‍‍‍‍‍‍‍‍‍‍‍‍‍‍ಗಳ ಹಾವಳಿ

ಕೋಲಾರ: ಜಿಲ್ಲೆಯ ಗ್ರಾಮೀಣ ಭಾಗಗಳು ಹಾಗೂ ಗಡಿ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಇವರ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾದರೆ ಅವರಿಗೆ ಶ್ರೀರಕ್ಷೆಯಾಗಿ ರಾಜಕಾರಣಿಗಳು ನಿಲ್ಲುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿವೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳನ್ನು ಲಾಭವಾಗಿಸಿಕೊಂಡ ನಕಲಿ ವೈದ್ಯರು ಗ್ರಾಪಂ, ಹೋಬಳಿ ಮಟ್ಟದಲ್ಲಿ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಸಾಮಾನ್ಯ ಕಾಯಿಲೆಗಳು ಬಂದರೂ ಹೈಡೋಸ್‌ ಇಂಜೆಕ್ಷನ್‌ ನೀಡುತ್ತಿರುವ ನಕಲಿಗಳು ಆ ಮೂಲಕ ಒಳ್ಳೆಯ ಕೈ ಗುಣವಿರುವ ವೈದ್ಯರೆಂಬ ಜನಮನ್ನಣೆ ಗಳಿಸುತ್ತಿದ್ದಾರೆ. ಪ್ರತಿ ರೋಗಿಗೂ ಇಂಜೆಕ್ಷನ್‌ ಕೊಡುವುದನ್ನು ರೂಢಿಯಾಗಿಸಿಕೊಂಡಿರುವ ನಕಲಿಗಳು ಕಡಿಮೆ ಅವಧಿಯಲ್ಲಿ ಫೇಮಸ್‌ ಆಗುತ್ತಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಂತಹ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಉಪಾಯ ಮಾಡಿರುವ ನಕಲಿಗಳು ಚುನಾವಣೆಗಳ ಸಂದರ್ಭದಲ್ಲಿ ತಮಗೆ ಬರುವ ಆದಾಯದಲ್ಲಿ ಒಂದಷ್ಟು ಹಣವನ್ನು ರಾಜಕಾರಣಿಗಳಿಗೆ ಕೊಟ್ಟು ಅವರ ವಿಶ್ವಾಸ ಗಳಿಸುತ್ತಿದ್ದಾರೆ.

ಅದರಂತೆ ದಾಳಿ ನಡೆಸಿದಾಗ ರಾಜಕಾರಣಿಗೆ ಕರೆ ಮಾಡಿ ವಿಷಯ ತಿಳಿಸಿದರೆ ಸಾಕು ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡುವ ರಾಜಕಾರಣಿಯು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.ನಿಮಗೆ ಇವರೊಬ್ಬರೇನಾ ಸಿಕ್ಕಿದ್ದು, ಜಿಲ್ಲೆಯಲ್ಲಿರುವ ಎಲ್ಲ ನಕಲಿ ಕ್ಲಿನಿಕ್‌ಗಳನ್ನು ಮುಚ್ಚಿಸಿ ಬನ್ನಿ ಬಳಿಕ ಇವರ ವಿರುದ್ಧ ಕ್ರಮ ಕೈಗೊಳ್ಳುವಿರಂತೆ ಎಂದು ಆವಾಜ್‌ ಹಾಕುವುದು ಸಾಮಾನ್ಯವಾಗಿದೆ.

ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದವರೆಲ್ಲ ಡಾಕ್ಟರ್‌!ವೈದ್ಯಕೀಯ ಸೀಟು ಪಡೆಯಲು ಲಕ್ಷಾಂತರ ಜನರ ಜತೆಗೆ ಪೈಪೋಟಿ ನಡೆಸಬೇಕಿದ್ದು, ಸೀಟು ಸಿಗದಂತಹ ಸಂದರ್ಭದಲ್ಲಿ ಮ್ಯಾನೇಜ್‌ಮೆಂಟ್‌ ಸೀಟು ಖರೀದಿಸಲು ಕೋಟ್ಯಂತರ ರೂ. ವೆಚ್ಚ ಮಾಡುವಂತಹ ಪರಿಸ್ಥಿತಿಯಿದೆ. ಆದರೆ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಓದಿದವರೂ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂದರೆ ನಂಬಲೇಬೇಕು.

ಕೋಲಾರ ಜಿಲ್ಲೆಯೊಂದರಲ್ಲಿಯೇ ಸುಮಾರು 200ಕ್ಕೂ ಹೆಚ್ಚಿನ ನಕಲಿ ವೈದ್ಯರು ಕೆಲಸ ಮಾಡುತ್ತಿದ್ದು, ರೋಗಿಗಳಿಗೆ ಹೈಡೋಸ್‌ ಔಷಧಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಮಾಹಿತಿಯಿಲ್ಲ. ಗ್ರಾಮೀಣ ಭಾಗದ ಜನರು ನಕಲಿಗಳನ್ನು ದೇವರೆಂದು ಪೂಜಿಸುವುದು ನಡೆಯುತ್ತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button