
ಹಲವು ನಕಲಿ ಫುಡ್ ಆ್ಯಪ್ಗಳು ನಗರದಲ್ಲಿ ಸಕ್ರಿಯವಾಗಿದ್ದು ಗ್ರಾಹಕರ ಬ್ಯಾಂಕ್ ಖಾತೆಗಳನ್ನೇ ಬರ್ಬಾದ್ ಮಾಡುತ್ತಿರುವ ದೂರುಗಳು ದಾಖಲಾಗಿವೆ.
ಜಾಲತಾಣಗಳಲ್ಲಿ ಆಹಾರಗಳ ಜಾಹಿರಾತುಗಳೊಂದಿಗೆ ಜೊಮ್ಯಾಟೋ, ಸ್ವಿಗಿ, ಖಾಂಧಾನಿ, ರಾಜಧಾನಿ ಫುಡ್, ರುಚಿ ಸಾಗರ್ ಹೆಸರಲ್ಲಿ ನಕಲಿ ಆ್ಯಪ್ಗಳನ್ನು ಸೈಬರ್ ಕಳ್ಳರು ಸೃಷ್ಟಿಸಿದ್ದು ಗ್ರಾಹಕರಿಂದ ಸೂಕ್ಷ್ಮ ಮಾಹಿತಿ ಸಂಗ್ರಹಿಸಿ ವಂಚಿಸುತ್ತಿದ್ದಾರೆ.
ಇಮ್ರಾನ್ ಮತ್ತು ದೀಪಿಕಾ ಎಂಬವರು ನಕಲಿ ಆ್ಯಪ್ಗಳಿಂದ ಒಟ್ಟು ₹ 2.23 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ಬೆಂಗಳೂರು ಪೂರ್ವ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಸ್ಕಾಂ, ಬ್ಯಾಂಕ್ ಕಾಲ್ಸೆಂಟರ್ ಮತ್ತು ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ನಡೆಯುತ್ತಿದ್ದ ಸೈಬರ್ ವಂಚನೆಗಳು ಈಗ ಆಹಾರದ ವಿಚಾರದಲ್ಲಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಂಚಕರು ಆಹಾರದ ಜಾಹಿರಾತು ನೀಡುತ್ತಾರೆ.
ಈ ಜಾಹಿರಾತುಗಳ ಮೇಲೆ ಕ್ಲಿಕ್ ಮಾಡಿ, ಅಲ್ಲಿರುವ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.
ಇವು ಜೊಮೆಟೊ ಅಥವಾ ಸ್ವಿಗಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದು ಗ್ರಾಹಕರು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಬಳಿಕ ಅವರ ಖಾತೆಯಲ್ಲಿರುವ ಹಣ ಹಂತಹಂತವಾಗಿ ಮಾಯವಾಗುತ್ತಿದೆ ಎಂದು ವಂಚನೆಗೊಳಗಾದ ಗ್ರಾಹಕರು ಹೇಳುತ್ತಿದ್ದಾರೆ.
ಖಾಂಧಾನಿ ರಾಜಧಾನಿ ರೆಸ್ಟೊರೆಂಟ್ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಪ್ರಕಟವಾಗಿದ್ದ ಜಾಹಿರಾತು ನೋಡಿದ್ದ ಇಮ್ರಾನ್ ಉಲ್ಲಾ ಬೇಗ್ ಆಹಾರ ತರಿಸಿಕೊಳ್ಳಲೆಂದು 62917 42717 ಸಂಖ್ಯೆಗೆ ಕರೆ ಮಾಡಿದ್ದರು.
ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು, ನಿಮ್ಮ ಆರ್ಡರ್ ಡೆಲಿವರಿಗೆ ₹ 250 ನೀಡಿ ಕನ್ಫರ್ಮ್ ಮಾಡಿಕೊಳ್ಳ’ ಎಂದು ಹೇಳಿದ್ದರು.
ಇಮ್ರಾನ್ ಹಣ ಪಾವತಿಸಿದರೂ ಅವರು ಹಣ ಬಂದಿಲ್ಲ ಎಂದು ಆ್ಯಪ್ನ ಲಿಂಕ್ ಒಂದನ್ನು ಕಳಿಸಿ, ಇನ್ಸ್ಟಾಲ್ ಮಾಡಿಕೊಂಡು ಅದರ ಸೂಚನೆ ಅನುಸರಿಸಿ ಎಂದಿದ್ದರು.
ಆ್ಯಪ್ ಇನ್ಸ್ಟಾಲ್ ಆದ ತಕ್ಷಣ ಹಂತಹಂತವಾಗಿ ಅವರ ಐಸಿಐಸಿಐ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಮೂಲಕ ₹ 2,23,858 ಹಣ ಪಾವತಿಯಾಗಿತ್ತು. ಕಂಗಾಲಾದ ಇಮ್ರಾನ್ ಉಲ್ಲಾ ಬೇಗ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ಮಾದರಿಯಲ್ಲಿ ಫೇಸ್ಬುಕ್ ಜಾಹಿರಾತು ನಂಬಿ ಆಹಾರದ ಆರ್ಡರ್ ಮಾಡಲು ಯತ್ನಿಸಿದ ಬಿ.ದೀಪಿಕಾ ₹ 61 ಸಾವಿರ ಕಳೆದುಕೊಂಡಿದ್ದಾರೆ.
ಖಾಂಧಾನಿ ರಾಜಧಾನಿ ರೆಸ್ಟೊರೆಂಟ್ ಮೂಲಕ ಆಹಾರ ತರಿಸಿಕೊಳ್ಳಲು ಯತ್ನಿಸಿದ ಅವರು, 62917 42717 ಸಂಖ್ಯೆಗೆ ಕರೆ ಮಾಡಿದ್ದರು.
ಅಲ್ಲಿಂದ ಬಂದ ಲಿಂಕ್ ಕ್ಲಿಕ್ ಮಾಡಿ, ರುಚಿ ಸಾಗರ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದರು. ನಂತರ ಅವರ ಕ್ರೆಡಿಟ್ ಕಾರ್ಡ್ನಿಂದ ಹಂತಹಂತವಾಗಿ ₹ 61,000 ಕಡಿತವಾಯಿತು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.