ನಕಲಿ ದಾಖಲೆ ಸೃಷ್ಟಿಸಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆ: ವಂಚಕ ಖಾಕಿ ಬಲೆಗೆ

ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ರೆಸ್ಟೋರೆಂಟ್‍ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸ್ಪೈಪಿಂಗ್ (ಪಿಒಎಸ್ ) ಮೆಷಿನ್‍ಗಳನ್ನು ಪಡೆದುಕೊಳ್ಳಲು ಯತ್ನಿಸಿದ್ದ ವಂಚಕನೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಉತ್ತರಪ್ರದೇಶ ಮೂಲದ ನವನೀತ್ ಪಾಂಡೆ(34) ಬಂಧಿತ ವಂಚಕ. ಈತ ಬನಶಂಕರಿ 2ನೇ ಹಂತದಲ್ಲಿ ವಾಸವಾಗಿದ್ದನು. ಬನಶಂಕರಿ 2ನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಕಿಂಡಬೀಸ್ ರೆಸ್ಟೋರೆಂಟ್ ಮಾಲೀಕ ವಿವೇಕ್ ಎಂಬುವರು ಡಿ.26ರಂದು ಸಂಜೆ 4.30ರ ಸಮಯದಲ್ಲಿ ರೆಸ್ಟೋರೆಂಟ್‍ನಲ್ಲಿದ್ದಾಗ ಜಯನಗರ ಜೆಎಸ್‍ಎಸ್ ಸರ್ಕಲ್‍ನಲ್ಲಿರುವ ಯೆಸ್ ಬ್ಯಾಂಕ್‍ನ ಸಿಬ್ಬಂದಿ ಎಂದು ಹೇಳಿಕೊಂಡು ಪಾಪರೆಡ್ಡಿ ಎಂಬುವರು ಬಂದಿದ್ದಾರೆ.ನಿಮ್ಮ ರೆಸ್ಟೋರೆಂಟ್ ಹೆಸರಿನಲ್ಲಿ ಪಿಒಎಸ್ ಮೆಷಿನ್ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದು ಈ ಬಗ್ಗೆ ಬ್ಯಾಂಕ್ ಕಡೆಯಿಂದ ವೆರಿಫಿಕೇಷನ್ ಗೆ ಬಂದಿರುವುದಾಗಿ ತಿಳಿಸಿ ಮಾಲೀಕರ ಬಳಿ ಮಾತನಾಡಬೇಕೆಂದು ಹೇಳಿದ್ದಾರೆ.ನಾನೇ ರೆಸ್ಟೋರೆಂಟ್ ಮಾಲೀಕ ಎಂದು ವಿವೇಕ್ ಅವರು ತಿಳಿಸಿದಾಗ, ನವನೀತ್ ಪಾಂಡೆ ಎಂಬುವರ ಹೆಸರಿನಲ್ಲಿ ತಮ್ಮ ರೆಸ್ಟೊರೆಂಟ್ ಪರವಾಗಿ ಪಿಒಎಸ್ ಮೆಷಿನ್‍ಗೆ ಅರ್ಜಿ ಸಲ್ಲಿಸಿರುವುದಾಗಿ ಬ್ಯಾಂಕ್‍ಗೆ ಸಲ್ಲಿಸಿರುವ ರೆಸ್ಟೋರೆಂಟ್ ಹೆಸರಿನ ಫಾರಮ್-3ರ ಜೆರಾಕ್ಸ್ ಪ್ರತಿಯಲ್ಲಿ ಫಾರ್ ಕಿಡಂಬೀಸ್ ಕಿಚನ್ ಎಂದು ಬರೆದಿದ್ದು, ಅದರ ಕೆಳಗೆ ಪ್ರೊಪ್ರೈಟರ್ ಎಂದು ಸೀಲ್ ಹಾಕಿರುವುದನ್ನು ಪಾಪರೆಡ್ಡಿ ತೋರಿಸಿದ್ದಾರೆ.ಅದನ್ನು ವಿವೇಕ್ ಅವರು ಪರಿಶೀಲನೆ ಮಾಡಿದಾಗ ಅದರಲ್ಲಿ ರೆಸ್ಟೋರೆಂಟ್ ಮಾಲೀಕ ನವನೀತ್‍ಪಾಂಡೆ ಎಂದು ನಮೂದಾಗಿದ್ದು, ಇದರಲ್ಲಿ ಸ್ವಯಂ ದೃಢೀಕರಿಸಲು ಹಾಕಿರುವ ಸೀಲ್ ನಕಲಿಯಾಗಿರುವುದು ಗಮನಕ್ಕೆ ಬಂದಿದೆ.ಈ ಸಂಬಂಧ ನವನೀತ್ ಪಾಂಡೆ ತಮ್ಮ ರೆಸ್ಟೋರೆಂಟ್‍ನ ನಕಲಿ ಪ್ರಮಾಣಪತ್ರ ಹಾಗೂ ನಕಲಿ ಸೀಲ್ ಸೃಷ್ಟಿಸಿಕೊಂಡು ರೆಸ್ಟೋರೆಂಟ್ ಹೆಸರಿನಲ್ಲಿ ಮೋಸ ಮಾಡುವ ಉದ್ದೇಶದಿಂದ ಪಿಒಎಸ್ ಮೆಷಿನ್‍ಗಾಗಿ ಅರ್ಜಿ ಸಲ್ಲಿಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಸರು ತನಿಖೆ ಕೈಗೊಂಡು ಬನಶಂಕರಿಯಲ್ಲಿ ವಾಸವಾಗಿದ್ದ ಆರೋಪಿ ನವನೀತ್ ಪಾಂಡೆಯನ್ನು ಬಂಧಿಸಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿರುವ ವಿವಿಧ ಬ್ಯಾಂಕ್‍ನ ಒಟ್ಟು 110 ಡೆಬಿಟ್ ಕಾರ್ಡ್‍ಗಳು, 110 ಕ್ರೆಡಿಟ್ ಕಾರ್ಡ್‍ಗಳು, 3 ಲ್ಯಾಪ್‍ಟಾಪ್, 6 ಮೊಬೈಲ್, ರೆಸ್ಟೋರೆಂಟ್ ಹಾಗೂ ಇನ್ನಿತರೆ 14 ವಿವಿಧ ನಕಲಿ ಸೀಲುಗಳು, ಆರೋಪಿಯನ್ನೊಳಗೊಂಡಂತೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿರುವ ವಿವಿಧ ಬ್ಯಾಂಕ್‍ಗಳ ಪಾಸ್‍ಬುಕ್ ಮತ್ತು ಚೆಕ್‍ಬುಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆ ಸಲುವಾಗಿ ಒಟ್ಟು 14 ದಿನಗಳ ಕಾಲ ಪೊಲೀಸ್ ಬಂಧನಕ್ಕೆ ಪಡೆಯಲಾಗಿದೆ.ದಕ್ಷಿಣ ವಿಭಾಗದ ಉಪಪೆಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಶ್ರೀನಿವಾಸ್ ಅವರ ಉಸ್ತುವಾರಿಯಲ್ಲಿ ಇನ್‍ಸ್ಪೆಕ್ಟರ್ ಗಿರೀಶ್ ನಾಯಕ್ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.