
ಬೆಂಗಳೂರು: ನಕಲಿ ಡಿಗ್ರಿ ಹಾಗೂ ಪಿಯುಸಿ ಮಾರ್ಕ್ಸ್ ಕಾರ್ಡ್‍ಗಳನ್ನು ತಯಾರಿಸಿ ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಅಯೂಬ್ ಪಾಷ ಅಲಿಯಾಸ್ ಅಯೂಬ್ ಹಾಗೂ ಖಲೀಲ್ ವುಲ್ಲಾ ಬೇಗ್ ಅಲಿಯಾಸ್ ಖಲೀಲ್ ಎಂಬಾತರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಫೇಕ್ ಸರ್ಟಿಫಿಕೇಟ್ ಗಳನ್ನು ತಯಾರಿಸಿ 20 ಸಾವಿರ, 30 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. 10ನೇ ತರಗತಿ, ಪಿಯುಸಿ ಹಾಗೂ ಡಿಗ್ರಿಯ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದ್ದರು.
ಯಾರಿಗೆ ಅವಶ್ಯಕತೆ ಇರುತ್ತದೋ ಅಂತಹವರಿಗೆ ಅಸಲಿ ತಲೆ ಮೇಲೆ ಹೊಡೆದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ 6 ಜನ ಮಾರ್ಕ್ ಕಾರ್ಡ್‍ಗಳನ್ನು ಪಡೆದಿರುವ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದ ಈ ಆರೋಪಿಗಳು ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು.
2003ರಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕೇಸ್ ದಾಖಲಾಗಿತ್ತು.ಸ್ಥಳೀಯ ಹುಡುಗರ ಮೂಲಕ ನಕಲಿ ದಾಖಲೆಗಳನ್ನು ಆರೋಪಿ ಖಲೀಲ್ ವುಲ್ಲಾ ಮಾರಾಟ ಮಾಡುತ್ತಿದ್ದ.
ಸದ್ಯ ಇಬ್ಬರು ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತದ್ದಾರೆ. ಬಂಧಿತ ಆರೋಪಿಗಳಿಂದ 38 ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಸಹ ಕೈಗೊಂಡಿದ್ದಾರೆ.