ನಕಲಿ ಚಿನ್ನಕ್ಕೆ ‘ಹಾಲ್ ಮಾರ್ಕ್’ ಹಾಕಿ ಸಾಲ ಪಡೆದಿದ್ದವರ ಬಂಧನ

ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮದಲ್ಲಿ ಶ್ರೀ ಭೀರೇಶ್ವರ ಕೊಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ನಕಲಿ ಚಿನ್ನಕ್ಕೆ ಹಾಲ್ ಮಾರ್ಕ ಹಾಕಿ ಅಸಲಿ ಚಿನ್ನ ಎಂದು ನಂಬಿಸಿ 2 ಲಕ್ಷ 75 ಸಾವಿರ ರೂಪಾಯಿ ಸಾಲ ಪಡೆದಿದ್ದ ಪ್ರಕರಣ ಭೇದಿಸುವಲ್ಲಿ ಚಿಕ್ಕೋಡಿಯ ಸದಲಗಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಭೋಜ ಶಾಖೆಯ ಭೀರೇಶ್ವರ ಕೊ ಆಪ್ ಕ್ರೆಡಿಟ್ ಸೊಸೈಟಿಯ ಮ್ಯಾನೇಜರ್ ಸದಲಗಾ ಗ್ರಾಮದ ಆನಂದ ಚಿದಾನಂದ ಕಮತೆ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಮುಖ ಆರೋಪಿ ಕೊಲ್ಹಾಪುರದ ಅಮೂಲ್ ಗಣಪತಿ ಪೋತದಾರ್ ಮತ್ತು ರಾಜಸ್ಥಾನ ಜೈಪುರ ಮೂಲದ ಪಪ್ಪು ಮದನಲಾಲ್ ಜಾಂಗಿಡನನ್ನು ಬಂಧಿಸಿದ್ದಾರೆ.
ಇನ್ನುಳಿದ ಆರೋಪಿಗಳಾದ ಇಚಲಕರಂಜಿಯ ಓಂಕಾರ ಚಂದ್ರಕಾಂತ ದಬಾಡೆ, ಗಣೇಶ ನೇಮಿನಾಥ ಗೋಡಕೆ, ಚಂದು ಗಜಾಜ ಬೋರಗೆ, ಗೌಸಪಾಕ್ ಅಬ್ದುಲ್‍ರಜಾಕ್ ಜಮಾದಾರ್, ಕೊಲ್ಹಾಪುರದ ಸುಹಾಸ ಸತ್ತಪ್ಪ ಮೋಹಿತೆ, ಅಥಣಿಯ ಫರಿದ್ ಅಬ್ದುಲ್ ಮಕಾನದಾರ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆಗೆ ಒಳಪಡಿಸಿದ್ದಾರೆ.
ಈ ಆರೋಪಿಗಳು ಬೋರಗಾಂವ ಜನತಾ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ, ಮಾಂಗೂರ ಶ್ರೀ ಭೈರವನಾಥ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ, ಹೆಬ್ಬಾಳ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ, ಕರ್ನಾಟಕ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ ರಾಯಬಾಗ, ಎಚ್‍ಡಿಎಫ್‍ಸಿ ಬ್ಯಾಂಕ್ ಚಿಕ್ಕೋಡಿ, ಎಂಎಜಿ ಫೈನಾನ್ಸ ಚಿಕ್ಕೋಡಿ, ಎಕ್ಸಿಸ್ ಬ್ಯಾಂಕ್ ಬೈಲಹೊಂಗಲ, ಎಕ್ಸಿಸ್ ಬ್ಯಾಂಕ್ ನಿಪ್ಪಾಣಿ, ಐಸಿಐಸಿ ಬ್ಯಾಂಕ್ ಚಿಕ್ಕೋಡಿ, ಭೋಜ ಶಾಖೆಯ ಭೀರೇಶ್ವರ ಕೊ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ನಕಲಿ ಚಿನ್ನಕ್ಕೆ ಹಾಲ್ ಮಾರ್ಕ ಹಾಕಿ ಅಸಲಿ ಚಿನ್ನ ಎಂದು ನಂಬಿಸಿ ಸಾಲ ಪಡೆದಿರುವುದು ಕಂಡು ಬಂದಿದೆ.
ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ತನಿಖೆಯನ್ನು ಸದಲಗಾ ಪೊಲೀಸರು ಕೈಗೊಂಡಿದ್ದಾರೆ. ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.